ದಾಖಲೆ ಪ್ರಕರಣಗಳ ವಿಲೇವಾರಿ: ದೇಶದಲ್ಲೇ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ದಾಖಲೆ
ದಾಖಲೆ ಪ್ರಕರಣಗಳ ವಿಲೇವಾರಿ: ದೇಶದಲ್ಲೇ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ದಾಖಲೆ
ಅತಿ ಹೆಚ್ಚು ಪ್ರಕರಣಗಳ ವಿಲೇವಾರಿ ಮಾಡುವ ಮೂಲಕ ದೇಶದಲ್ಲೇ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ದಾಖಲೆ ಬರೆದಿದ್ದಾರೆ. ಆರು ವರ್ಷಗಳ ತಮ್ಮ ಅವಧಿಯಲ್ಲಿ ಇದುವರೆಗೆ ಅವರು ವಿವಿಧ ನಮೂನೆಗಳ 22 ಸಾವಿರ ಪ್ರಕರಣ ಗಳನ್ನು ವಿಲೇವಾರಿ ಮಾಡಿದ್ದಾರೆ.
ಅಷ್ಟು ಪ್ರಮಾಣದ ಕೇಸ್‌ಗಳನ್ನು ಇತ್ಯರ್ಥಪಡಿಸಿದ ದೇಶದ ಮೊದಲ ಹೈಕೋರ್ಟ್ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.
ವಿಲೇವಾರಿಯ ಕ್ಷಿಪ್ರಗತಿಯಲ್ಲಿ ಅವರು ದೇಶದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದ್ಧಾರೆ. ಅವರು ಇತ್ಯರ್ಥಪಡಿಸಿದ 22 ಸಾವಿರ ತೀರ್ಪುಗಳಲ್ಲಿ 985 ಸೂಚಿತ (ರಿಪೋರ್ಟೆಡ್) ತೀರ್ಪುಗಳಾಗಿ ದಾಖಲಾಗಿವೆ. ಸದ್ಯ ಅವರು ರೊಟೇಷನ್ ಆಧಾರದ ಮೇಲೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಂದೇ ದಿನದಲ್ಲಿ 600ಕ್ಕೂ ಅಧಿಕ ಕೇಸುಗಳ ವಿಲೇವಾರಿ ಮಾಡಿ ಎರಡು ಬಾರಿ ದಾಖಲೆ ಬರೆದಿರುವ ನ್ಯಾಯಮೂರ್ತಿಯವರು, ಕೇಸ್‌ಗಳ ತ್ವರಿತ ಇತ್ಯರ್ಥಕ್ಕೆ ಹೆಸರುವಾಸಿಯಾದವರು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಆರು ವರ್ಷಗಳ ಸೇವೆ ಪೂರೈಸಿದ್ದು, ಅದರ ಬೆನ್ನಲ್ಲೇ ಅತ್ಯಧಿಕ ಕೇಸ್‌ಗಳನ್ನು ಇತ್ಯರ್ಥಪಡಿಸಿ ದಾಖಲೆ ನಿರ್ಮಿಸಿದ ಕರ್ನಾಟಕದ ಹೈಕೋಟ್ ೯ನ ಮೊದಲ ನ್ಯಾಯಮೂರ್ತಿ ಎನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದನ್ನು ಎತ್ತಿಹಿಡಿದ ತೀರ್ಪು ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ಅವರು ಬರೆದು ಜನಮನ್ನಣೆ ಗಳಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2019ರ ನ.26 ರಂದು ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ಎಂ. ನಾಗಪ್ರಸನ್ನ ಅವರ ಸೇವಾವಧಿ 2033ರವರೆಗೂ ಇದೆ.