ಜೈಲ್‌ನಲ್ಲಿ ಮೊಬೈಲ್ ಜಾಮರ್: ಕೋರ್ಟ್‌ನಲ್ಲಿ ಸಿಗ್ನಲ್ ಪ್ರಾಬ್ಲಮ್- ಹೈಕೋರ್ಟ್ ಕದ ತಟ್ಟಿದ ವಕೀಲರ ಸಂಘ
ಜೈಲ್‌ನಲ್ಲಿ ಮೊಬೈಲ್ ಜಾಮರ್: ಕೋರ್ಟ್‌ನಲ್ಲಿ ಸಿಗ್ನಲ್ ಪ್ರಾಬ್ಲಮ್- ಹೈಕೋರ್ಟ್ ಕದ ತಟ್ಟಿದ ವಕೀಲರ ಸಂಘ
ವಿಚಾರಣಾಧೀನ ಖೈದಿಗಳ ನಿಯಂತ್ರಣಕ್ಕೆ ಜೈಲ್‌ನಲ್ಲಿ ಹಾಕಿದ ಮೊಬೈಲ್ ಜಾಮರ್‌ನಿಂದ ತೊಂದರೆ ಅನುಭವಿಸಿದ್ದು ವಕೀಲರು, ನ್ಯಾಯಾಲಯದ ಸಿಬ್ಬಂದಿ. ಕೋರ್ಟ್‌ನಲ್ಲಿ ಸಿಗ್ನಲ್ ಪ್ರಾಬ್ಲಂನಿಂದ ಸಮಸ್ಯೆ ಉಂಟಾಗಿದೆ ಎಂದು ವಕೀಲರ ಸಂಘ ಕರ್ನಾಟಕ ಹೈಕೋರ್ಟ್ ಕದ ತಟ್ಟಿದೆ.
ಮಂಗಳೂರಿನ ಜಿಲ್ಲಾ ಕಾರಾಗೃಹದ ಸುಮಾರು ಒಂದು ಕಿಲೋ ಮೀರ್ ವ್ಯಾಪ್ತಿಯಲ್ಲಿ ನಾಗರಿಕರೂ ಮೊಬೈಲ್ ಜಾಮರ್‌ನಿಂದ ಪರದಾಡುವಂತಾಗಿದೆ. ಈ ಬಗ್ಗೆ ವಕೀಲರ ಸಂಘ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್‌ಗಳನ್ನು ತಕ್ಷಣವೇ ತೆರವುಗೊಳಿಸಲು ಗೃಹ ಇಲಾಖೆ, ಜೈಲು ಅಧೀಕ್ಷಕರು ಸೇರಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಮಂಗಳೂರು ವಕೀಲರ ಸಂಘ ಮತ್ತದರ ಅಧ್ಯಕ್ಷ ಎಚ್ ವಿ ರಾಘವೇಂದ್ರ ಹಾಗೂ ಕಾರ್ಯದರ್ಶಿ ಶ್ರೀಧರ ಹೊಸಮನೆ ಈ ಅರ್ಜಿ ಸಲ್ಲಿಸಿದ್ದರು.
ಜೈಲ್‌ನಲ್ಲಿ ಜಾಮರ್ ಹಾಕಲಾಗಿದೆ. ಈ ಜಾಮರ್ ಮೊಬೈಲ್ ನೆಟ್‌ವರ್ಕ್‌ನ್ನು ನಿಷ್ಕ್ರಿಯಗೊಳಿಸುತ್ತದೆ. ಇದರ ವ್ಯಾಪ್ತಿ ಸುಮಾರು ಒಂದರಿಂದ ಒಂದೂವರೆ ಕಿ.ಮೀ. ಮತ್ತು ಈ ವ್ಯಾಪ್ತಿಯೊಳಗೆ ಕೋರ್ಟ್ ಹಾಗೂ ಇತರ ಸರ್ಕಾರಿ ಕಚೇರಿಗಳು, ವಾಣಿಜ್ಯ ಸಂಕೀರ್ಣಗಳು ಇವೆ. ಮಂಗಳೂರು ವಕೀಲರ ಸಂಘದ ಕಚೇರಿಯೂ ಇದೆ. ಜಾಮರ್‌ಗಳ ಅಳವಡಿಕೆಯಿಂದ ಕೋರ್ಟ್ ಹಾಗೂ ಸಂಘದ ಕಾರ್ಯಚಟುವಟಿಕೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ವಕೀಲರ ಸಂಘ ತನ್ನ ಅರ್ಜಿಯಲ್ಲಿ ಹೇಳಿದೆ.
ಕಾರಾಗೃಹದ ಆವರಣದೊಳಗೆ ಮಾತ್ರ ಜಾಮರ್ ಕಾರ್ಯನಿರ್ವಹಿಸಿದರೆ ಸಮಸ್ಯೆ ಇಲ್ಲ. ಆದರೆ, ಸುತ್ತಮುತ್ತಲ ಪ್ರದೇಶದಲ್ಲೂ ಸಮಸ್ಯೆ ಎದುರಾಗಿದೆ. ಜಾಮರ್‌ಗಳಿಂದಾಗಿ ವಕೀಲರು, ನ್ಯಾಯಾಧೀಶರು ಹಾಗೂ ಕಕ್ಷಿದಾರರು ಕಷ್ಟ ಅನುಭವಿಸುತ್ತಿದ್ದಾರೆ. ಮೊಬೈಲ್ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆಯಿಂದ ಸಂಪರ್ಕಗಳು ಕಡಿತಗೊಂಡು ಪರದಾಡುವಂತಾಗಿದೆ. ಜಾಮರ್‌ಗಳಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಘ ಆರೋಪಿಸಿತು.
ವಕೀಲರ ಸಂಘದ ವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ವಸ್ತುಸ್ಥಿತಿ ನ್ಯಾಯಪೀಠದ ಮುಂದಿಡುವಂತೆ ಸರ್ಕಾರಿ ವಕೀಲರಿಗೆ ಒಂದು ವಾರ ಕಾಲಾವಕಾಶ ನೀಡಿತು. ಕಾರಾಗೃಹದ ಆವರಣದೊಳಗಿನ ವಿವಿಧ ಸ್ಥಳಗಳಲ್ಲಿ ಹಾಗೂ ಕಾರಾಗೃಹದಿಂದ ಕೋರ್ಟ್‌ವರೆಗೆ ಮತ್ತು ನ್ಯಾಯಾಲಯದ ವಿವಿಧ ಸ್ಥಳಗಳಲ್ಲಿ ಮೊಬೈಲ್ ಸಿಗ್ನಲ್ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಖಚಿತಪಡಿಸುವ ತಾಂತ್ರಿಕ ವರದಿ ಸಲ್ಲಿಸಬೇಕು. ಜಾಮರ್‌ಗಳಿಂದ ಬರುವ ಜಾಮಿಂಗ್ ಸಿಗ್ನಲ್‌ಗಳು ನ್ಯಾಯಾಲಯದಲ್ಲಿ ಮೊಬೈಲ್ ಸಿಗ್ನಲ್‌ಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುತ್ತವೆಯೇ ಎಂಬ ಬಗ್ಗೆಯೂ ವರದಿಯಲ್ಲಿ ವಿವರಿಸಿರಬೇಕು ಎಂದು ನಿರ್ದೇಶಿಸಿತು. ಮುಂದಿನ ವಿಚಾರಣೆ ನವೆಂಬರ್ 18ಕ್ಕೆ ನಡೆಯಲಿದೆ.