ಹೆಜ್ಜೆ ಹೆಜ್ಜೆಗೂ ಆಘಾತಕಾರಿ ಸುಳ್ಳು, ತನಿಖೆ ತಪ್ಪಿಸಲು ಸರಣಿ ಕಳ್ಳದಾರಿ- ಮಹೇಶ್ ಜೋಶಿ ವಿರುದ್ಧ ಹೈಕೋರ್ಟ್‌ನಲ್ಲಿ ವಾದ
ಹೆಜ್ಜೆ ಹೆಜ್ಜೆಗೂ ಆಘಾತಕಾರಿ ಸುಳ್ಳು, ತನಿಖೆ ತಪ್ಪಿಸಲು ಸರಣಿ ಕಳ್ಳದಾರಿ- ಮಹೇಶ್ ಜೋಶಿ ವಿರುದ್ಧ ಹೈಕೋರ್ಟ್‌ನಲ್ಲಿ ವಾದ
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳುತ್ತಿರುವ ಎಲ್ಲ ಅಂಶಗಳೂ ಅಕ್ಷರಶಃ ಸುಳ್ಳು. ಅವರ ನಡವಳಿಕೆ ಆಘಾತಕಾರಿಯಾಗಿದೆ. ಒಂದಲ್ಲ, ಎರಡಲ್ಲ ಸಾಲು-ಸಾಲು ಸುಳ್ಳುಗಳನ್ನು ಹೇಳಿ, ಅದನ್ನೇ ಸತ್ಯವೆಂದು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದಾರೆ.
ಈ ವಾದವನ್ನು ಹೈಕೋರ್ಟ್ ಮುಂದೆ ಮಂಡಿಸಿದವರು ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ. ಆಡಳಿತಾಧಿಕಾರಿ ನೇಮಕದ ಆದೇಶಕ್ಕೆ ತಡೆ ಕೋರಿ ಮಹೇಶ್ ಜೋಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.
ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಿಸಿ 2025ರ ಜೂ.26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರುವಂತೆ ಮಹೇಶ್ ಜೋಶಿ ಅರ್ಜಿಯಲ್ಲಿ ತಿಳಿಸಿದ್ದಾರೆ.
"ತನಿಖಾಧಿಕಾರಿ ನೋಟಿಸ್ ನೀಡಿದಾಗ ಕುಟುಂಬದಲ್ಲಿ ಸಾವು ಸಂಭವಿಸಿದೆ, ಪ್ರಯಾಣ ಮಾಡಬೇಕು. 15 ದಿನ ಕಾಲಾವಕಾಶ ಕೊಡಿ ಎಂದು ಜೋಶಿ ಕೋರಿದ್ದರು. ಆದರೆ, ಅವರು ಎಲ್ಲೂ ಪ್ರಯಾಣ ಮಾಡಿಲ್ಲ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ರೈಲ್ವೆ ಟಿಕೆಟ್ ಬುಕ್ ಮಾಡಿ, ನಂತರ ಅದನ್ನು ರದ್ದು ಮಾಡಿಸಿದ್ದಾರೆ. ಟಿಕೆಟ್ ರದ್ದು ಮಾಡಿಸಿದ ವಿವರ ನೀಡದಂತೆ ರೈಲ್ವೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ವಾರಾಣಸಿಯಿಂದ ಲಖನೌಗೆ ವಿಮಾನ ಪ್ರಯಾಣ ಮಾಡಿದ ಅವಧಿ ಗಮನಿಸಿದರೆ, ಮನುಷ್ಯರಿಂದ ಅದು ಸಾಧ್ಯವೇ ಇಲ್ಲ'' ಎಂದು ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ನ್ಯಾಯಪೀಠಕ್ಕೆ ತಿಳಿಸಿದರು.
''ಪ್ರಯಾಣ ಮಾಡಬೇಕಾಗಿದೆ ಎಂದು ಹೇಳಿದ್ದ ದಿನಗಳಲ್ಲಿ ಜೋಶಿ ಕಸಾಪ ಕಚೇರಿಗೆ ಬಂದು, ದೈನಂದಿನ ಜವಾಬ್ದಾರಿ ನಿರ್ವಹಿಸಿದ್ದಾರೆ,'' ಎಂದು ಅಡ್ವಕೇಟ್ ಜನರಲ್ ಹೇಳಿದರು. "ಮಹೇಶ್ ಜೋಶಿ ಅವರು ಕಚೇರಿಗೆ ಬಂದಿದ್ದು ಹೇಗೆ ಗೊತ್ತಾಯಿತು" ಎಂದು ನ್ಯಾಯಪೀಠ ಕೇಳಿತು. ಅದಕ್ಕೆ, ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ ಎಂದು ಶಶಿಕಿರಣ್ ಶೆಟ್ಟಿ ಉತ್ತರಿಸಿದರು. ಕಸಾಪ ಅಧ್ಯಕ್ಷರ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇರುವ ಬಗ್ಗೆ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿತು.
ಅನವಶ್ಯಕವಾಗಿ ಸಿಸಿಟಿವಿ ಕ್ಯಾಮೆರಾ ಹಾಕಿದ್ದು, ಹಣ ದುರ್ಬಳಕೆಯ ಮಾತುಗಳೂ ಕೇಳಿಬಂದಿವೆ. ಸಿಸಿಟಿವಿ ದೃಶ್ಯಾವಳಿ ಕೊಡದಂತೆ ಕಸಾಪ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಕಾನೂನು ಮತ್ತು ನ್ಯಾಯಾಲಯವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ವೈಯುಕ್ತಿಕ ಟಾರ್ಗೆಟ್ ಮಾಡಿಲ್ಲ
ತನಿಖಾಧಿಕಾರಿ ನೇಮಕ ಕ್ರಮವನ್ನು ಸಮರ್ಥಿಸಿಕೊಂಡ ಅಡ್ವಕೇಟ್ ಜನರಲ್, ಈ ಪ್ರಕರಣದಲ್ಲಿ ಜೋಶಿಯವರನ್ನು ವೈಯುಕ್ತಿಕವಾಗಿ ಟಾರ್ಗೆಟ್ ಮಾಡಲಾಗಿಲ್ಲ. ತನಿಖೆ ನಡೆಯಲಿ, ನ್ಯಾಯಾಲಯವೇ ಕಾಲಮಿತಿ ನಿಗದಿಪಡಿಸಿ ಮೇಲ್ವಿಚಾರಣೆ ನಡೆಸಲಿ. ಅರ್ಜಿದಾರರ ನಡವಳಿಕೆ ಅನುಮಾನಾಸ್ಪದ ಹಾಗೂ ಆಘಾತಕಾರಿಯಾಗಿದೆ ಎಂದರು.
ಈ ವೇಳೆ ಜೋಶಿಯವರ ನಡವಳಿಕೆ ಬಗ್ಗೆ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, "ಇದು ಕಾನೂನು ಮತ್ತು ನ್ಯಾಯಾಲಯದ ದುರ್ಬಳಕೆ ಆಗಿದೆ. ಆದ್ದರಿಂದ 30 ದಿನಗಳಲ್ಲಿ ತನಿಖೆ ಮುಗಿಸಬೇಕು. ಅಲ್ಲಿವರೆಗೆ ಯಾವುದೇ ಸಭೆ ನಡೆಯುವಂತಿಲ್ಲ. ತನಿಖೆಗೆ ಜೋಶಿ ಸಂಪೂರ್ಣವಾಗಿ ಸಹಕರಿಸಬೇಕು. ಈ ವಿಚಾರದಲ್ಲಿ ಯಾವುದೇ ವಿನಾಯಿತಿ ಇಲ್ಲ. ಜೋಶಿ ತನಿಖೆಗೆ ಸಹಕರಿಸದಿದ್ದರೆ ಸರಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಬೇಕು'' ಎಂದು ಸೂಚಿಸಿತು.