ಮುರಿದುಬಿದ್ದ ಸಂಬಂಧಕ್ಕೆ ಅಪರಾಧದ ಲೇಪ: ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಎಂದ ಸುಪ್ರೀಂ ಕೋರ್ಟ್
ಮುರಿದುಬಿದ್ದ ಸಂಬಂಧಕ್ಕೆ ಅಪರಾಧದ ಲೇಪ: ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಎಂದ ಸುಪ್ರೀಂ ಕೋರ್ಟ್
ವಿಫಲವಾದ ಅಥವಾ ಮುರಿದುಬಿದ್ದ ಸಂಬಂಧಗಳಿಗೆ ಕೊನೆಗೊಂದು ದಿನ ಅತ್ಯಾಚಾರದಂತಹ ಅಪರಾಧದ ಬಣ್ಣವನ್ನು ನೀಡುವ 'ಆತಂಕಕಾರಿ ಪ್ರವೃತ್ತಿ' ಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುರಿದುಬಿದ್ದ ಸಂಬಂಧಕ್ಕೆ ಅಪರಾಧದ ಲೇಪ ನೀಡಿ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಮಾಡಲಾಗುತ್ತಿರುವುದು ಅತ್ಯಂತ ಕಳವಳಕಾರಿ ಮತ್ತು ಖಂಡನಾರ್ಹ' ಎಂದು ನ್ಯಾಯಪೀಠ ಹೇಳಿದ್ದು, ಅತ್ಯಾಚಾರ ಪ್ರಕರಣವೊಂದರ ಎಫ್‌ಐಆರ್ ರದ್ದುಗೊಳಿಸಿದೆ.
'ಮುರಿದುಬಿದ್ದ ಪ್ರತಿಯೊಂದು ಸಂಬಂಧವನ್ನು ಅತ್ಯಾಚಾರದ ಅಪರಾಧವಾಗಿ ಪರಿವರ್ತಿಸುವುದು ಸರಿಯಲ್ಲ. ಇದು ಇಂತಹ ಅಪರಾಧದ ಗಂಭೀರತೆಯನ್ನು ಲಘುವಾಗಿ ಕಾಣುವಂತೆ ಮಾಡುತ್ತದೆ. ಅಲ್ಲದೆ, ಆರೋಪಿಯ ಮೇಲೆ ಅಳಿಸಲಾಗದ ಕಳಂಕವನ್ನು ಉಂಟುಮಾಡುತ್ತದೆ' ಎಂದು ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ನಿಜವಾದ ಲೈಂಗಿಕ ದೌರ್ಜನ್ಯ, ಬಲವಂತ ನಡೆದಿರುವ ಅಥವಾ ಪರಸ್ಪರ ಸಮ್ಮತಿಯಿಲ್ಲದ ಪ್ರಕರಣಗಳಿಗೆ ಮಾತ್ರ ಅತ್ಯಾಚಾರದ ಅಪರಾಧವನ್ನು ಅನ್ವಯಿಸಬಹುದು ಎಂದು ನ್ಯಾಯಪೀಠ ಹೇಳಿತು.
2025ರ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದೆ.