ಆರುಂಧತಿ ರಾಯ್ ತಂಬಾಕು ಉತ್ಪನ್ನದ ಪ್ರಚಾರ ಮಾಡಿಲ್ಲ: ಪುಸ್ತಕ ಮಾರಾಟ, ಪ್ರಸಾರ ನಿಷೇಧ ಕೋರಿ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಆರುಂಧತಿ ರಾಯ್ ತಂಬಾಕು ಉತ್ಪನ್ನದ ಪ್ರಚಾರ ಮಾಡಿಲ್ಲ: ಪುಸ್ತಕ ಮಾರಾಟ, ಪ್ರಸಾರ ನಿಷೇಧ ಕೋರಿ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಪ್ರಸಿದ್ಧ ಲೇಖಕಿ ಆರುಂಧತಿ ರಾಯ್ ಅವರ 'ಮದರ್ ಮೇರಿ ಕಮ್ಸ್ ಟು ಮಿ' ಪುಸ್ತಕದ ಮಾರಾಟ, ಪ್ರಸಾರ ಮತ್ತು ಪ್ರದರ್ಶನವನ್ನು ನಿಷೇಧ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ನಿ ಅವರಿದ್ದ ನ್ಯಾಯಪೀಠ ಈ ಅರ್ಜಿಯನ್ನು ವಜಾಗೊಳಿಸಿದೆ.
ಲೇಖಕಿ ಆರುಂಧತಿ ರಾಯ್ ಅವರು ತಮ್ಮ ಪುಸ್ತಕದ ಮುಖಪುಟದಲ್ಲಿ 'ಬೀಡಿ' ಅಥವಾ 'ಸಿಗರೇಟ್' ಸೇದುತ್ತಿರುವ ಚಿತ್ರವನ್ನು ಪ್ರಕಟಿಸಿಕೊಂಡಿದ್ದಾರೆ. ಅದು ಕಾನೂನಿಗೆ ವಿರುದ್ಧವಾಗಿದೆ ಎಂದು ರಾಜಸಿಂಹನ್ ಎಂಬುವರು ಕೇರಳ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದರು.
ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜಸಿಂಹನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
'ಸಿಗರೇಟ್ ಯಾ ಬೀಡಿಯನ್ನು ಪ್ರಸಿದ್ಧ ಲೇಖಕಿ ಆಗಿರುವ ಆರುಂಧತಿ ರಾಯ್ ಪ್ರಚಾರ ಮಾಡಿಲ್ಲ. ಅಲ್ಲದೆ ಪುಸ್ತಕದ ಚಿತ್ರವು ನಗರದ ಯಾವುದೇ ಹೋರ್ಡಿಂಗ್‌ನಲ್ಲಿ ಇಲ್ಲ. ಪುಸ್ತಕವನ್ನು ತೆಗೆದುಕೊಂಡು ಓದುವವರು ಮಾತ್ರ ಅದನ್ನು ನೋಡುತ್ತಾರೆ' ಎಂದು ನ್ಯಾಯಪೀಠ ಗಮನಿಸಿತು.
ಈ ಹಿನ್ನೆಲೆಯಲ್ಲಿ ಲೇಖಕರು ಮತ್ತು ಪ್ರಕಾಶಕ ಸಂಸ್ಥೆ ಪೆಂಗ್ವಿನ್ ಹಮಿಶ್ ಹ್ಯಾಮಿಲ್ಟನ್, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ-2003ರ ಕಲಂ 5 ಅನ್ನು ಉಲ್ಲಂಘಿಸಿಲ್ಲ ಮತ್ತು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ನಿರ್ಧಾರ ಸರಿಯಾಗಿದೆ ಎಂದೂ ಪೀಠ ಹೇಳಿತು.
ಹೀಗಾಗಿ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸೂಕ್ತ ಕಾರಣವಿಲ್ಲ ಎಂದು ಪೀಠ ತಿಳಿಸಿತು. ಇದು ಲೇಖಕಿ ಅರುಂಧತಿ ರಾಯ್ ಅವರ ಆತ್ಮಚರಿತ್ರೆಯ ಪುಸ್ತಕವಾಗಿದೆ.