ನ್ಯಾಯಾಧೀಶರ ರಕ್ಷಣಾ ಅಧಿನಿಯಮಕ್ಕೆ ಕೋರ್ಟ್ ಅಮೀನರು, ಪ್ರೋಸೆಸ್ ಸರ್ವರ್‌ಗಳು ಒಳಪಡುತ್ತಾರೆಯೇ..?
ನ್ಯಾಯಾಧೀಶರ ರಕ್ಷಣಾ ಅಧಿನಿಯಮಕ್ಕೆ ಕೋರ್ಟ್ ಅಮೀನರು, ಪ್ರೋಸೆಸ್ ಸರ್ವರ್‌ಗಳು ಒಳಪಡುತ್ತಾರೆಯೇ..?
ಕೋರ್ಟು ಅಮೀನರು (ಬೇಲಿಫ್) ಮತ್ತು ಆದೇಶಿಕೆ ಜಾರಿಕಾರರು (ಪ್ರೊಸೆಸರ್ ಸರ್ವರ್) ನ್ಯಾಯಾಧೀಶರ ರಕ್ಷಣಾ ಅಧಿನಿಯಮದ ವ್ಯಾಪ್ತಿಗೆ ಒಳಪಡುತ್ತಾರೆಯೇ?
ಕೋರ್ಟು ಅಮೀನರು (ಬೇಲಿಫ್‌ಗಳು) ಹಾಗೂ ಆದೇಶಿಕೆ ಜಾರಿಕಾರರು (ಪ್ರೊಸೆಸ್ ಸರ್ವರ್‌ಗಳು) 1985ರ ನ್ಯಾಯಾಧೀಶರ (ರಕ್ಷಣೆ) ಅಧಿನಿಯಮದ ವ್ಯಾಪ್ತಿಗೆ ನೇರವಾಗಿ ಒಳಪಡುವುದಿಲ್ಲ. ಆದರೆ, ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಸದುದ್ದೇಶದಿಂದ (good faith) ಕೈಗೊಂಡ ಕೃತ್ಯಗಳಿಗೆ ಸಂಬಂಧಿಸಿ, ಹಿಂದಿನ ಹಾಗೂ ಸಂಬಂಧಿತ ಕಾನೂನಾದ 1850ರ ನ್ಯಾಯಾಂಗ ಅಧಿಕಾರಿಗಳ ರಕ್ಷಣೆ ಅಧಿನಿಯಮದ ಅಡಿಯಲ್ಲಿ ಅವರಿಗೆ ರಕ್ಷಣೆ ದೊರೆಯುತ್ತದೆ.
ರಕ್ಷಣೆಯ ವಿವರಣೆ
ನ್ಯಾಯಾಧೀಶರ (ರಕ್ಷಣೆ) ಅಧಿನಿಯಮ, 1985:
ಈ ಅಧಿನಿಯಮವು ಅಧಿಕೃತವಾಗಿ “ನ್ಯಾಯಾಧೀಶರು” ಎಂದು ನೇಮಕಗೊಂಡವರಿಗೆ ಅಥವಾ ಕಾನೂನಿನ ಪ್ರಕಾರ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅಂತಿಮ ತೀರ್ಪು ನೀಡುವ ಅಧಿಕಾರ ಹೊಂದಿರುವವರಿಗೆ ಅಂದರೆ ನ್ಯಾಯಾಂಗ ಕಾರ್ಯ ನಿರ್ವಹಿಸುವವರಿಗೆ ವಿಶೇಷವಾಗಿ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ.
ಬೇಲಿಫ್ ಮತ್ತು ಪ್ರೊಸೆಸ್ ಸರ್ವರ್ ನ್ಯಾಯಾಲಯದ ಸಿಬ್ಬಂದಿಯಾಗಿದ್ದು, ಅವರು ನ್ಯಾಯಾಂಗ ಕಾರ್ಯ ಅಂದರೆ ತೀರ್ಪು ನೀಡುವುದನು ಹೊರತುಪಡಿಸಿ, ಆಡಳಿತಾತ್ಮಕ ಮತ್ತು ಕಾರ್ಯನಿರ್ವಾಹಕ ಕಾರ್ಯಗಳನ್ನು ಅಂದರೆ ನೋಟಿಸ್‌ಗಳು/ಅಧಿಪತ್ರಗಳನ್ನು ಜಾರಿಗೊಳಿಸುವುದು, ವಾರಂಟ್‌ಗಳನ್ನು ಅನುಷ್ಠಾನಗೊಳಿಸುವುದು ಮುಂತಾದ ಕಾರ್ಯ ನಿರ್ವಹಿಸುತ್ತಾರೆ.
ನ್ಯಾಯಾಂಗ ಅಧಿಕಾರಿಗಳ ರಕ್ಷಣೆ ಅಧಿನಿಯಮ, 1850:
ಈ ಕಾನೂನು ನ್ಯಾಯಾಧೀಶರು ಹಾಗೂ ಮ್ಯಾಜಿಸ್ಟ್ರೇಟ್‌ಗಳ ಜೊತೆಗೆ “ವಾರಂಟ್‌ಗಳು ಮತ್ತು ಆದೇಶಗಳನ್ನು ಜಾರಿಗೊಳಿಸುವ ಅಧಿಕಾರಿಗಳು” ಎಂಬವರನ್ನೂ ಸ್ಪಷ್ಟವಾಗಿ ಒಳಗೊಂಡಿದೆ. ಸದುದ್ದೇಶದಿಂದ ಅಧಿಕೃತವಾಗಿ ಕೈಗೊಂಡ ಕಾರ್ಯಗಳಿಗೆ ಸಂಬಂಧಿಸಿ, ಸಿವಿಲ್ ಮೊಕದ್ದಮೆಗಳಿಂದ ಅವರನ್ನು ರಕ್ಷಿಸುವುದೇ ಇದರ ಉದ್ದೇಶ.
ರಕ್ಷಣೆಯ ವ್ಯಾಪ್ತಿ:
ಬೇಲಿಫ್ ಮತ್ತು ಪ್ರೋಸೆಸ್ ಸರ್ವರ್ ಅವರಿಗೆ ನೀಡಲಾಗಿರುವ ಈ ರಕ್ಷಣೆ, ನ್ಯಾಯಾಲಯದ ಆದೇಶಗಳ ಪ್ರಕಾರ ಮತ್ತು ಸದುದ್ದೇಶದಿಂದ ತಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ, ಅಸಮಾಧಾನಗೊಂಡ ವ್ಯಕ್ತಿಗಳಿಂದ ವೈಯಕ್ತಿಕವಾಗಿ ದಾವೆ ಹೂಡಲ್ಪಡುವ ಭಯವಿಲ್ಲದೆ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
1985ರ ಅಧಿನಿಯಮವು, ನ್ಯಾಯಾಧೀಶರಿಗೆ ರಕ್ಷಣೆ ನೀಡುವ ಇತರ ಯಾವುದೇ ಕಾನೂನುಗಳಿಗಿಂತ ಹೆಚ್ಚುವರಿಯಾಗಿದ್ದು, ಅವುಗಳನ್ನು ಹಾನಿಗೊಳಿಸುವುದಲ್ಲ ಎಂದು ಹೇಳುತ್ತದೆ. ಇದರಲ್ಲಿ 1850ರ ಅಧಿನಿಯಮ ಮತ್ತು ಇತರೆ ಸೇವಾ ನಿಯಮಗಳು ಸಹ ಒಳಗೊಂಡಿವೆ.
ಒಟ್ಟಿನಲ್ಲಿ, 1985ರ ಅಧಿನಿಯಮದ ಕಟ್ಟುನಿಟ್ಟಾದ ವ್ಯಾಖ್ಯಾನದ ಪ್ರಕಾರ ಅವರು “ನ್ಯಾಯಾಧೀಶರು” ಎಂದು ಪರಿಗಣಿಸಲ್ಪಡದಿದ್ದರೂ, ನ್ಯಾಯಾಂಗ ಆದೇಶಗಳ ಅಡಿಯಲ್ಲಿ ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಇತರ ಕಾನೂನುಗಳ ಮೂಲಕ ಅವರಿಗೆ ಸೂಕ್ತ ರಕ್ಷಣೆ ಒದಗಿಸಲಾಗಿದೆ.
✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ದಕ್ಷಿಣ ಕನ್ನಡ ನ್ಯಾಯಾಂಗ ಇಲಾಖೆ