-->
ವಕೀಲರಿಗೆ ವಿಮಾ ಯೋಜನೆ, ಕೇಂದ್ರ ಸರ್ಕಾರ ಪ್ರತಿನಿಧಿಸುವ ವಕೀಲರ ಶುಲ್ಕ ಹೆಚ್ಚಳ: ಕೇಂದ್ರ ಕಾನೂನು ಸಚಿವರ ಘೋಷಣೆ

ವಕೀಲರಿಗೆ ವಿಮಾ ಯೋಜನೆ, ಕೇಂದ್ರ ಸರ್ಕಾರ ಪ್ರತಿನಿಧಿಸುವ ವಕೀಲರ ಶುಲ್ಕ ಹೆಚ್ಚಳ: ಕೇಂದ್ರ ಕಾನೂನು ಸಚಿವರ ಘೋಷಣೆ

 



ಕೇಂದ್ರ ಸರ್ಕಾರವು ವಕೀಲರಿಗಾಗಿ ವೈದ್ಯಕೀಯ ವಿಮೆ ಮತ್ತು ಅಪಘಾತ ವಿಮೆಯನ್ನು ಒಳಗೊಂಡಿರುವ ವಿಮಾ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಅರ್ಜುನ್ ರಾಮ್ ಮೇಘ್ವಾಲ್ ಅವರು ಘೋಷಿಸಿದ್ದಾರೆ. ಇದಲ್ಲದೆ, ಕೇಂದ್ರ ಸರ್ಕಾರ ಹಾಗೂ ಅದರ ಸಂಸ್ಥೆಗಳ ಪ್ಯಾನೆಲ್ ವಕೀಲರ ಶುಲ್ಕವನ್ನು ಹೆಚ್ಚಿಸಲಾಗುವುದು ಹಾಗೂ ಶುಲ್ಕ ಪಾವತಿಯಲ್ಲಿ ಆಗುತ್ತಿರುವ ವಿಳಂಬದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.


ರಾಜಸ್ಥಾನದ ಬಾಲೋತ್ರದಲ್ಲಿ ಆಯೋಜಿಸಲಾದ ಅಖಿಲ ಭಾರತೀಯ ಅಧಿವಕ್ತ ಪರಿಷತ್ತಿನ 17ನೇ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದ ಕೊನೆಯಲ್ಲಿ ಈ ಘೋಷಣೆಗಳನ್ನು ಮಾಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವಕೀಲರ ಮಹಾಸಭೆಯನ್ನು ಉದ್ದೇಶಿಸಿ ಅವರು, “ನಿಮ್ಮ ಶುಲ್ಕವನ್ನು ಹೆಚ್ಚಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಪಾವತಿ ಆಗುತ್ತಿಲ್ಲ. ಆ ಸಮಸ್ಯೆಯನ್ನೂ ನಾವು ಪರಿಹರಿಸುತ್ತಿದ್ದೇವೆ” ಎಂದು ಹೇಳಿದರು.


“ನಾವು ಪ್ರಕರಣವನ್ನು ಹೋರಾಡಿದ್ದೇವೆ, ಆದರೆ ಕೋಲ್ ಇಂಡಿಯಾ (ಉದಾಹರಣೆಗೆ) ಪಾವತಿ ಮಾಡುತ್ತಿಲ್ಲ ಎಂದು ಹಲವರು ಹೇಳುತ್ತಾರೆ. ಇದು ಸಮಸ್ಯೆಯಲ್ಲವೇ?” ಎಂದು ಅವರು ನಗುತ್ತಾ ಪ್ರಶ್ನಿಸಿದರು. ಸಭೆಯಲ್ಲಿದ್ದ ವಕೀಲರು ಇದಕ್ಕೆ ಸಮ್ಮತಿಸಿದರು. “ಆ ಸಮಸ್ಯೆಯನ್ನೂ ನಾವು ಪರಿಹರಿಸುತ್ತಿದ್ದೇವೆ” ಎಂದು ಸಚಿವರು ಪುನರುಚ್ಚರಿಸಿದರು.


ವಕೀಲರಿಗಾಗಿ ವಿಮಾ ಯೋಜನೆಯನ್ನು ಘೋಷಿಸುತ್ತಾ ಅವರು, “ನಾವು ನಿಮಗಾಗಿ ವಿಮಾ ಯೋಜನೆಯನ್ನು ತರುತಿದ್ದೇವೆ. ಇದರಲ್ಲಿ ವೈದ್ಯಕೀಯ ವಿಮೆ ಮತ್ತು ಗುಂಪು ವಿಮೆ ಎರಡೂ ಇರಲಿವೆ. ಅಪಘಾತವೂ ಇದರೊಳಗೆ ಒಳಗೊಳ್ಳಲಿದೆ” ಎಂದು ಹೇಳಿದರು.


“ವಕೀಲರ ರಕ್ಷಣಾ ಕಾಯ್ದೆ ಕಾನೂನು ಆಯೋಗದ ಮುಂದೆ ಬಾಕಿಯಿದೆ. ಉಳಿದ ಎಲ್ಲಾ ಸಮಸ್ಯೆಗಳನ್ನೂ ಸಹ ಪರಿಹರಿಸಲಾಗುವುದು” ಎಂದು ವಕೀಲರ ಸಭೆಗೆ ಅವರು ಭರವಸೆ ನೀಡಿದರು.


ತಮ್ಮ ಭಾಷಣದ ಆರಂಭದಲ್ಲಿ ಕಾನೂನು ಸಚಿವರು ಭಾರತೀಯ ಉತ್ತರಾಧಿಕಾರ ಕಾಯ್ದೆಗೆ ಇತ್ತೀಚೆಗೆ ತಂದಿರುವ ತಿದ್ದುಪಡಿ ಕುರಿತು ಮಾತನಾಡಿ, “ಸಂಸತ್ತಿನಲ್ಲಿ ನಾವು ಆತುರದಲ್ಲಿ ಕಾನೂನು ತಂದಿದ್ದೇವೆ ಎಂದು ಹೇಳಲಾಯಿತು. ಆದರೆ ಅದು ಸತ್ಯವಲ್ಲ. ಪ್ರಧಾನಮಂತ್ರಿ ಮೋದಿಜಿಯವರು ಪ್ರಧಾನಿಯಾದ ನಂತರದಿಂದಲೇ ‘ಈಸ್ ಆಫ್ ಲಿವಿಂಗ್’ ಉಪಕ್ರಮದ ಭಾಗವಾಗಿ ಅನಗತ್ಯವಾದ ಕಾನೂನುಗಳನ್ನು ರದ್ದುಪಡಿಸಬೇಕೆಂದು ಹೇಳುತ್ತಾ ಬಂದಿದ್ದಾರೆ. ಅಗತ್ಯವಿಲ್ಲದಿದ್ದರೂ ಅಸ್ತಿತ್ವದಲ್ಲಿದ್ದ 562 ಕಾನೂನುಗಳನ್ನು ನಾವು ಈಗಾಗಲೇ ರದ್ದುಪಡಿಸಿದ್ದೇವೆ. ಈಗ ಇನ್ನೂ 71 ಕಾನೂನುಗಳನ್ನು ರದ್ದುಪಡಿಸಿದ್ದೇವೆ” ಎಂದು ಹೇಳಿದರು.


“ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನದ ಆತ್ಮವೇನು ಎಂದು ಕೇಳಿದಾಗ, ಅದು ವಿಧಿ 32 ಎಂದು ಅವರು ಹೇಳಿದ್ದಾರೆ. ಇಂದು ಬಾಬಾಸಾಹೇಬ್ ಅವರು ಆಗ ಹೇಳಿದ್ದ ಮಾತು ಸತ್ಯವೆಂದು ಸಾಬೀತಾಗಿದೆ. ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಧಿ 32 ಸಂವಿಧಾನದ ಆತ್ಮದಂತೆ ಕಾರ್ಯನಿರ್ವಹಿಸುತ್ತಿದೆ. ರಾಜ್ಯಗಳಲ್ಲಿ ಅದೇ ಪಾತ್ರವನ್ನು ವಿಧಿ 226 ನಿರ್ವಹಿಸುತ್ತದೆ” ಎಂದು ಅವರು ಹೇಳಿದರು.


ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ ಎಂಬ ಸಂವಿಧಾನದ ಆಧಾರ ಸ್ತಂಭಗಳು ಸುರಕ್ಷಿತವಾಗಿದ್ದರೆ, ನಾವು ಎಲ್ಲರೂ ಸುರಕ್ಷಿತರಾಗಿರುತ್ತೇವೆ ಮತ್ತು ರಾಷ್ಟ್ರ ಪ್ರಗತಿಪಥದಲ್ಲಿ ಸಾಗುತ್ತದೆ ಎಂದು ಅವರು ಹೇಳಿದರು. 21ನೇ ಶತಮಾನವು ಏಷ್ಯಾದ ಶತಮಾನವಾಗಿದ್ದು, ಈ ಶತಮಾನದಲ್ಲಿ ಭಾರತವು ಏಷ್ಯಾವನ್ನು ಮುನ್ನಡೆಸಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.


ಅದೇ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರು ಭಾಷಾ ಪ್ರಾಂತೀಯತೆಯ ವಿರುದ್ಧ ಮಾತನಾಡಿ, ಇಂತಹ ಪ್ರವೃತ್ತಿಗಳು ರಾಷ್ಟ್ರಕ್ಕೆ ಅಪಾಯಕಾರಿ ಎಂದು ಹೇಳಿದರು. ಇಂತಹ ಮನೋಭಾವನೆಗಳನ್ನು ನಿರ್ಮೂಲನೆ ಮಾಡುವಲ್ಲಿ ವಕೀಲರು ತಮ್ಮ ಕೊಡುಗೆ ನೀಡಬೇಕು ಎಂದೂ ಅವರು ಕರೆ ನೀಡಿದರು.


ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನ್ಯಾಯಾಲಯಗಳ ಮೂಲಕ ಮೂಲಭೂತ ಹಕ್ಕುಗಳ ಜಾರಿಗೆ ಬೇಡಿಕೆ ಇಡುವ ಯಾವುದೇ ವ್ಯಕ್ತಿ ಮೊದಲು ಭಾರತೀಯ ಸಂವಿಧಾನದಲ್ಲಿ ನಿಗದಿಪಡಿಸಿರುವ ಮೂಲಭೂತ ಕರ್ತವ್ಯಗಳ ಪಾಲನೆಯನ್ನೂ ತೋರಿಸಬೇಕು ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article