-->
ಬಹುಕೋಟಿ ಹಗರಣದ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ- ಸಹಕಾರಿ ಸಂಘಗಳ ಜಂಟಿ ನಿಬಂಧಕರಿಗೆ ದೂರು- ಷಡಕ್ಷರಿ ಅವರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು?

ಬಹುಕೋಟಿ ಹಗರಣದ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ- ಸಹಕಾರಿ ಸಂಘಗಳ ಜಂಟಿ ನಿಬಂಧಕರಿಗೆ ದೂರು- ಷಡಕ್ಷರಿ ಅವರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು?

ಬಹುಕೋಟಿ ಹಗರಣದ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ- ಸಹಕಾರಿ ಸಂಘಗಳ ಜಂಟಿ ನಿಬಂಧಕರಿಗೆ ದೂರು- ಷಡಕ್ಷರಿ ಅವರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು?





ಹೈಕೋರ್ಟ್ ಆದೇಶ ಉಲ್ಲಂಘಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಹುಕೋಟಿ ಹಗರಣದ ವಿಚಾರಣೆ ನಡೆಸಿದ ತಪ್ಪಿತಸ್ಥ ವಿಚಾರಣಾಧಿಕಾರಿ ವಿರುದ್ಧ ಶಿಸ್ತು ಕ್ರಮ ಹಾಗೂ ವಿಚಾರಣಾ ವರದಿ ರದ್ದತಿ ಕೋರಿ ದೂರು ದಾಖಲು


ಮಾನ್ಯ ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಲ್ಲಿಸಲಾದ ತನಿಖಾ ವರದಿಯನ್ನು ರದ್ದುಪಡಿಸಿ ತಪ್ಪಿತಸ್ಥ ವಿಚಾರಣಾಧಿಕಾರಿ ಯವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಹಾಗೂ ವಿಚಾರಣಾ ವರದಿಯನ್ನು ರದ್ದುಪಡಿಸುವಂತೆ ಕೋರಿ ಸಂಘದ ಮಾಜಿ ರಾಜ್ಯ ಪರಿಷತ್ ಸದಸ್ಯರು ಹಾಗೂ ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಬಿ. ಗಂಗಾಧರ್ ಅವರು ಸಹಕಾರಿ ಸಂಘಗಳ ಜಂಟಿ ನಿಬಂಧಕರಿಗೆ ದೂರು ಸಲ್ಲಿಸಿದ್ದಾರೆ.


ಪ್ರಕರಣದ ಹಿನ್ನೆಲೆ


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಪಾರ್ಕ್, ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಷಡಕ್ಷರಿ ಸಿ.ಎಸ್. ಇವರ ವಿರುದ್ಧ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಶಾಂತರಾಮ್ ಮತ್ತು ಇತರರು ದಿನಾಂಕ 2.6.2023 ರಂದು ಸಲ್ಲಿಸಿದ ದೂರಿನ ಆಧಾರದ ಮೇಲೆ, ಕರ್ನಾಟಕ ಸರ್ಕಾರವು ತನ್ನ ಪತ್ರ ಸಂಖ್ಯೆ 42 CSR 29/23 ದಿನಾಂಕ 19.06.2023 ಮೂಲಕ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಕಲಂ 25(1) ಅಡಿಯಲ್ಲಿ ದುರಾಡಳಿತ ಮತ್ತು ನಿಧಿಗಳ ದುರುಪಯೋಗದ ಆರೋಪಗಳ ಕುರಿತು ತನಿಖೆ ನಡೆಸುವಂತೆ ಬೆಂಗಳೂರು ನಗರ ಜಿಲ್ಲೆ, 4ನೇ ವಿಭಾಗದ ಜಿಲ್ಲಾ ನಿಬಂಧಕರಿಗೆ ಆದೇಶಿಸಿತ್ತು.


ಅದರಂತೆ, ಶ್ರೀ ಶಶಿಧರ್ ಪಿ., ಜಿಲ್ಲಾ ನಿಬಂಧಕರು, 4ನೇ ವಿಭಾಗ, ಬೆಂಗಳೂರು ನಗರ ಜಿಲ್ಲೆ ಅವರು ತನಿಖಾ ನೋಟೀಸ್ ಜಾರಿ ಮಾಡಿ ತನಿಖೆಯನ್ನು ಪ್ರಾರಂಭಿಸಿದ್ದರು.


ಸಂಘದ ಅಧ್ಯಕ್ಷರು ಈ ತನಿಖಾ ಕ್ರಮವನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ಮುಂದೆ W.P. No.20700/2023 ರಲ್ಲಿ ಪ್ರಶ್ನಿಸಿದರು. ಪ್ರಾರಂಭದಲ್ಲಿ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದ್ದು, ನಂತರ ಮಾನ್ಯ ಹೈಕೋರ್ಟ್ ತನ್ನ 03.12.2024ರ ಅಂತಿಮ ಆದೇಶದ ಮೂಲಕ ರಿಟ್ ಅರ್ಜಿಯನ್ನು ವಜಾಗೊಳಿಸಿ, ಕೆಳಕಂಡಂತೆ ಸ್ಪಷ್ಟ ನಿರ್ದೇಶನ ನೀಡಿದೆ:


ಪ್ರತಿವಾದಿ ಸಂಖ್ಯೆ–3 ಆಗಿರುವ ಬೆಂಗಳೂರು ನಗರ ಜಿಲ್ಲೆ, 4ನೇ ವಿಭಾಗದ ಜಿಲ್ಲಾ ನಿಬಂಧಕರು, ಸಂಘದ ವಿರುದ್ಧದ ದುರಾಡಳಿತ ಮತ್ತು ನಿಧಿಗಳ ದುರುಪಯೋಗದ 15 ಆರೋಪಗಳ ಕುರಿತು, ಸಂಘದ ವ್ಯವಸ್ಥಾಪಕ ಸಮಿತಿ ರಚನೆಯ ದಿನಾಂಕದಿಂದ 6 ತಿಂಗಳೊಳಗೆ ತನಿಖೆ ನಡೆಸಬೇಕು.


ಸಂಘದ ವ್ಯವಸ್ಥಾಪಕ ಸಮಿತಿಯು 27.12.2024 ರಂದು ಅಧಿಕಾರ ಸ್ವೀಕರಿಸಿದ್ದು, ಆದ್ದರಿಂದ ತನಿಖೆಯನ್ನು 27.06.2025ರೊಳಗೆ ಪೂರ್ಣಗೊಳಿಸಬೇಕಾಗಿತ್ತು.


ಮಾನ್ಯ ಹೈಕೋರ್ಟ್ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆ


ಮಾನ್ಯ ಹೈಕೋರ್ಟ್ ಸ್ಪಷ್ಟವಾಗಿ ಪ್ರತಿವಾದಿ ಸಂಖ್ಯೆ–3 ಆಗಿರುವ ಶ್ರೀ ಶಶಿಧರ್ ಪಿ. ಅವರೇ ತನಿಖೆ ನಡೆಸಬೇಕು ಎಂದು ನಿರ್ದೇಶಿಸಿದ್ದರೂ, ಶಶಿಧರ್ ಪಿ. ಅವರು ಕಾನೂನು ಬಾಹಿರವಾಗಿ ನ್ಯಾಯಾಲಯದ ಅನುಮತಿ ಇಲ್ಲದೆ, ತನಿಖೆಯನ್ನು ಶ್ರೀ ಚಂದ್ರಶೇಖರ್ ಎನ್., ಸಹಕಾರ ಅಭಿವೃದ್ಧಿ ಅಧಿಕಾರಿ, 2ನೇ ವಿಭಾಗ, ಬೆಂಗಳೂರು ನಗರ ಜಿಲ್ಲೆ (ಗುಂಪು–ಬಿ ಅಧಿಕಾರಿ) ಅವರಿಗೆ ಅನಧಿಕೃತವಾಗಿ ವಹಿಸಿದ್ದಾರೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959, ಅದರ ನಿಯಮಗಳು ಅಥವಾ ಮಾನ್ಯ ಹೈಕೋರ್ಟ್ ಆದೇಶದಲ್ಲಿ, ಕಲಂ 25(1) ಅಡಿಯಲ್ಲಿ ವಹಿಸಲಾದ ತನಿಖಾಧಿಕಾರವನ್ನು ಮತ್ತೊಬ್ಬರಿಗೆ ವಹಿಸುವ ಯಾವುದೇ ಅಧಿಕಾರವನ್ನು ಜಿಲ್ಲಾ ನಿಬಂಧಕರಿಗೆ ನೀಡಿಲ್ಲ.

ಆದ್ದರಿಂದ, ಈ ರೀತಿಯ ಉಪನಿಯೋಜನೆ (sub-delegation) ಕಾನೂನುಬಾಹಿರವಾಗಿದ್ದು, ಮಾನ್ಯ ಹೈಕೋರ್ಟ್ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆಯಾಗಿದೆ.


3. ಕಾಲಮಿತಿ ಮೀರಿ ತನಿಖೆ ಮತ್ತು ಸುಳ್ಳು ಮಾಹಿತಿ


ತನಿಖಾ ವರದಿಯನ್ನು 27.06.2025ರೊಳಗೆ ಸಲ್ಲಿಸಬೇಕಾಗಿದ್ದರೂ, ಅದನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲಾಗಿಲ್ಲ.

ಅಲ್ಲದೆ, 07.08.2025ರಂದು ನಡೆದ ಶ್ರೀ ಬಿ. ಗಂಗಾಧರ್ ಅವರು ಸಲ್ಲಿಸಿದ ಆರ್‌ಟಿಐ ಮೊದಲ ಮೇಲ್ಮನವಿಯಲ್ಲಿ ವಿಚಾರಣೆಯ ವೇಳೆ, ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಶ್ರೀ ಶಶಿಧರ್ ಪಿ. ಅವರು ಸುಳ್ಳು ಮಾಹಿತಿ ನೀಡಿದ್ದು, ವಾಸ್ತವವಾಗಿ ತನಿಖಾ ವರದಿ 15.07.2025ರಲ್ಲೇ ಸಲ್ಲಿಸಲಾಗಿತ್ತು.

ಶಾಸನಾತ್ಮಕ ಪ್ರಾಧಿಕಾರಕ್ಕೆ ಸುಳ್ಳು ಮಾಹಿತಿ ನೀಡಿರುವುದು ಆಡಳಿತಾತ್ಮಕ ನ್ಯಾಯತತ್ತ್ವಗಳಿಗೆ ವಿರುದ್ಧವಾಗಿದೆ.


4. ತನಿಖಾ ವರದಿ ಕಾನೂನುಬಾಹಿರ – ಶೂನ್ಯ (Void ab initio)


ಶ್ರೀ ಚಂದ್ರಶೇಖರ್ ಎನ್. ಅವರಿಗೆ ಮಾನ್ಯ ಹೈಕೋರ್ಟ್ ಆದೇಶದಡಿ ತನಿಖೆ ನಡೆಸುವ ಯಾವುದೇ ಅಧಿಕಾರ, ನ್ಯಾಯಾಧಿಕಾರ ಅಥವಾ ಸಾಮರ್ಥ್ಯ ಇರಲಿಲ್ಲ.

ಆದ್ದರಿಂದ ಅವರು ಸಲ್ಲಿಸಿರುವ ತನಿಖಾ ವರದಿಯು ಅಧಿಕಾರವಿಲ್ಲದೆ ಸಲ್ಲಿಸಲಾದದ್ದು, ಮಾನ್ಯ ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ.

ಕಲಂ 25(1) ಉಲ್ಲಂಘನೆಯಾದದ್ದು,

ಕಾನೂನಿನ ದೃಷ್ಟಿಯಲ್ಲಿ ಶೂನ್ಯ (non-est) ಆಗಿರುತ್ತದೆ.

ಮೇಲಾಗಿ, ಸಂಘದ ನಿಧಿಗಳಲ್ಲಿ ಕೋಟ್ಯಂತರ ರೂಪಾಯಿಗಳ ದುರುಪಯೋಗಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳನ್ನು ತನಿಖಾ ವರದಿ ಸ್ಪರ್ಶಿಸದೇ ಬಿಟ್ಟಿರುವುದು ದಾಖಲೆಗಳ ಮುಖಾಂತರವೇ ಸ್ಪಷ್ಟವಾಗುತ್ತದೆ.


5. ಕಾನೂನು ತತ್ತ್ವ – Delegatus non potest delegare


ಆಡಳಿತಾತ್ಮಕ ಕಾನೂನಿನಲ್ಲಿ “ನಿಯೋಜಿತನು ಮತ್ತೊಮ್ಮೆ ನಿಯೋಜಿಸಲು ಸಾಧ್ಯವಿಲ್ಲ” (Delegatus non potest delegare) ಎಂಬ ತತ್ತ್ವವು ಸ್ಥಿರವಾಗಿ ಅಂಗೀಕೃತವಾಗಿದೆ.

ಶಾಸನ ಅಥವಾ ನ್ಯಾಯಾಲಯವು ನಿರ್ದಿಷ್ಟ ಅಧಿಕಾರಿಗೆ ಅಧಿಕಾರ ವಹಿಸಿದಲ್ಲಿ, ಆ ಅಧಿಕಾರವನ್ನು ಅದೇ ಅಧಿಕಾರಿ ವೈಯಕ್ತಿಕವಾಗಿ ಬಳಸಬೇಕು, ಬೇರೆ ಯಾರಿಗೂ ವಹಿಸಲು ಸಾಧ್ಯವಿಲ್ಲ ಎಂಬುದನ್ನು ಮಾನ್ಯ ಸುಪ್ರೀಂ ಕೋರ್ಟ್ ಪದೇಪದೇ ಸ್ಪಷ್ಟಪಡಿಸಿದೆ.


ಸಂಘದ ಅಧ್ಯಕ್ಷರ ವಿರುದ್ಧದ ಹೊರಿಸಲಾದ ಆರೋಪಗಳು


1) ಸಂಘವು 2019-20ರ ಆರ್ಥಿಕ ಸಾಲಿನಲ್ಲಿ ಸದಸ್ಯರಲ್ಲದವರಿಂದ ರೂಪಾಯಿ 83,15,164 ಆದಾಯ ದಾಖಲಿಸಿದ್ದು ಅದಕ್ಕೆ ಆದಾಯ ತೆರಿಗೆ ಪಾವತಿಸಿರುವುದಿಲ್ಲ. ಈ ತೆರಿಗೆ ವಂಚನೆಯನ್ನು 2020-21 ಮತ್ತು 2022-23 ಮೇ ಸಾಲಿನಲ್ಲಿಯೂ ಮುಂದುವರಿಸಿ ಸರಕಾರಕ್ಕೆ ವ್ಯಾಪಕ ಆರ್ಥಿಕ ಹಾನಿ ಎಸಗಿ ಮೋಸ ಮಾಡಿರುವುದು


2) 2019ನೇ ಸಾಲಿನಲ್ಲಿ ಕ್ರೀಡಾಕೂಟಕ್ಕೆ ರೂಪಾಯಿ 87.90 ಲಕ್ಷ ಮತ್ತು 2020 ನೇ ಸಾಲಿನಲ್ಲಿ ರೂಪಾಯಿ 152.16 ಲಕ್ಷ ಪಾವತಿಸಿದ್ದು ಈ ವೆಚ್ಚ ಪಾವತಿಸುವಾಗ ಆದಾಯ ತೆರಿಗೆ ಕಾಯ್ದೆಯಂತೆ ಟಿಡಿಎಸ್ ಪಾವತಿಸದೇ ಇರುವುದು


3) ಸಂಘದ ಸಭೆಯಲ್ಲಿ ನಿರ್ಣಯಿಸದೆ 2020- 21ನೆಯ ಸಾಲಿನಲ್ಲಿ ಕಿಯಾ ಕಾರ್ನಿವಲ್ ಕಾರನ್ನು ರುಪಾಯಿ 35.02 ಲಕ್ಷದಲ್ಲಿ ವೆಚ್ಚದಲ್ಲಿ ಖರೀದಿಸಿರುವುದು


4) 2019-20 ನೇ ಸಾಲಿನ ಕ್ರೀಡಾಕೂಟದ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿ ಸಂಗ್ರಹಿಸಿದ್ದು ಕಿಯಾ ಕಾರ್ನಿವಾಲ್ ಕಾರ್ ಖರೀದಿಸಲಾಗಿದೆ ಎಂದು ದಾಖಲಿಸಲಾಗಿದೆ. ಆದರೆ ಜಾಹೀರಾತು ಸಂಗ್ರಹಣೆ ಮೊತ್ತಕ್ಕೆ ಜಿ ಎಸ್ ಟಿ ಪಾವತಿಸಿಲ್ಲ. ಒಂದು ಕೋಟಿ ಹಣ ಸಂಗ್ರಹಣೆ ಪೈಕಿ ರೂಪಾಯಿ 55,95,000 ಸಂಘದ ಖಾತೆಗೆ ಜಮೆಯಾಗಿದ್ದು ಉಳಿಕೆ ಹಣ ರೂಪಾಯಿ 44,05,000 ಸಂಘದ ಖಾತೆಗೆ ಜಮಾ ಮಾಡದೆ ಭ್ರಷ್ಟಾಚಾರ ಎಸಗಿರುವುದು


5) 2019-20 ರಿಂದ 2022 23ರ ವರೆಗಿನ ಸಾಲುಗಳಲ್ಲಿ ಕೇಂದ್ರ ಸಂಘ ಮತ್ತು ಅದರ ಘಟಕ ಸಂಘಗಳ ಕಟ್ಟಡಗಳಲ್ಲಿನ ಬೃಹತ್ ವ್ಯಾಪಾರ ಮಳಿಗೆಗಳು, ಸಭಾಭವನಗಳು, ಸಮುದಾಯ ಭವನಗಳು ಉಪಾಹಾರ ಗೃಹಗಳನ್ನು ಬಾಡಿಗೆಗೆ ನೀಡಿ ಸದಸ್ಯರಲ್ಲದವರಿಂದ ಆದಾಯ ಪಡೆದು ಸರಕಾರಕ್ಕೆ ಆದಾಯ ತೆರಿಗೆ, ಜಿಎಸ್‌ಟಿ, ಆಸ್ತಿ ತೆರಿಗೆ, ಟಿಡಿಎಸ್ ವಂಚಿಸಿ ರೂಪಾಯಿ ರೂಪಾಯಿ 5 ಕೋಟಿಗೂ ಅಧಿಕ ಆರ್ಥಿಕ ನಷ್ಟವನ್ನು ಉಂಟು ಮಾಡಿರುವುದು.


6)ಸಂಘದ ಬೈಲಾವನ್ನು ನಿಯಮಾನುಸಾರ ಸರ್ವ ಸದಸ್ಯರ ಸಭೆಯಲ್ಲಿ ತಿದ್ದುಪಡಿ ಮಾಡದೆ ವಾರ್ಷಿಕ ಸದಸ್ಯತ್ವ ಶುಲ್ಕವನ್ನು ರೂಪಾಯಿ 100 ರಿಂದ 200 ಕ್ಕೆ ಹೆಚ್ಚಿಸಿ ಸದಸ್ಯರಿಂದ ರೂಪಾಯಿ 3 ಕೋಟಿ ಅಕ್ರಮವಾಗಿ ಸಂಗ್ರಹಿಸಿರುವುದು


7) ಕ್ರೆಸೆಂಟ್ ರೇಸ್ ವ್ಯೂ ಕಾಂಪೌಂಡ್ ನ ಸರಕಾರಿ ವಸತಿ ಗ್ರಹ ಸಂಖ್ಯೆ 21 ನ್ನು ಸಂಘದ ಹೆಸರಿನಲ್ಲಿ ರಾಜ್ಯಾಧ್ಯಕ್ಷರ ಹೆಸರಿಗೆ ನಿಯಮಬಾಹಿರವಾಗಿ ನಾಮಾಂಕಿತ ಗೃಹ ಎಂದು ಆದೇಶಿಸಿ ಗೃಹ ಸಂಖ್ಯೆ 20ರೊಂದಿಗೆ ವಿಲೀನಗೊಳಿಸಿ, ಒಂದೇ ವಸತಿ ಗೃಹವನ್ನಾಗಿ ಪರಿವರ್ತಿಸಿ ಬಾಡಿಗೆಯನ್ನು ಸಂಘದಿಂದ ಪಾವತಿಸಲ್ಪಡುವಂತೆ ತೀರ್ಮಾನಿಸಿ ಸರಕಾರಿ ಗೃಹ ಹಂಚಿಕೆ ನಿಯಮ 1999 ಅನ್ನು ಉಲ್ಲಂಘಿಸಿರುವುದು


8) ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ 12863/ 2021 ರಲ್ಲಿ ನೀಡಿದ ಆದೇಶವನ್ನು ಪಾಲಿಸದೆ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ನಿಯಮಬಾಹಿರವಾಗಿ ಸಂಘದ ಉಪಬಂಧಗಳಿಗೆ ತಿದ್ದುಪಡಿ ಮಾಡಿ ನೋಂದಾಯಿಸಿರುವುದು


9) ಕೋವಿಡ್ 19 ಪೆಂಡಮಿಕ್ ಕಾಲಮಾನದಲ್ಲಿ ದಾವಣಗೆರೆಯಲ್ಲಿ ದಿನಾಂಕ 11.10.2020 ರಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಕಲಂ 182 ಅನ್ನು ಉಲ್ಲಂಘಿಸಿ ಸರ್ವ ಸದಸ್ಯರ ಸಭೆಯನ್ನು ಜರಗಿಸಿ ಲಕ್ಷಾಂತರ ಹಣ ಅಪವ್ಯಯ ಮಾಡಿರುವುದನ್ನು ಸಂಬಂಧ ಪಟ್ಟವರಿಂದ ವಸೂಲಿ ಮಾಡಿ ಸಂಘಕ್ಕೆ ಪಾವತಿಸುವ ಬಗ್ಗೆ ಕ್ರಮ ಕೈಗೊಳ್ಳವುದು.


10) ಎಲ್ಲಾ ಶಾಖೆಗಳಿಗೆ ಅವುಗಳ ಪಾಲಿನ ವಾರ್ಷಿಕ ಸಂಘದ ಸದಸ್ಯತ್ವ ಹಣವನ್ನು ಮರುಪಾವತಿಸದೆ ತನ್ನಲ್ಲೇ ಬಾಕಿ ಉಳಿಸಿಕೊಂಡಿರುವುದು


11) ಶಾಖಾ ಸಂಘಗಳ ಜಮಾ-ಖರ್ಚು ಲೆಕ್ಕ ಪತ್ರಗಳನ್ನು ನೋಂದಾಯಿತ ಸಂಘವಾಗಿ ಸೇರ್ಪಡಿಸಿಕೊಳ್ಳದೆ ನ್ಯಾಯಯುತ ಮತ್ತು ಸತ್ಯಯುತ ಬ್ಯಾಲೆನ್ಸ್ ಶೀಟನ್ನು ಸತತ ಐದು ವರ್ಷಗಳಿಂದ ಸಮಗ್ರವಾಗಿ ನೊಂದಣಾಧಿಕಾರಿಗಳಿಗೆ ಸಲ್ಲಿಸಲು ವಿಫಲವಾಗಿರುವುದು


12) ನಿಯಮಬಾಹಿರವಾಗಿ ಅನ್ಯ ಬ್ಯಾಂಕಿನೊಂದಿಗೆ ವಿವಿಧ ಖಾತೆ ಹೊಂದಿ ವ್ಯವಹಾರ ಕೈಗೊಂಡಿರುವುದು


13) ಸಂಘದ ಉದ್ದೇಶಕ್ಕೆ ಹೊರತಾದ ಉದ್ದೇಶಗಳಿಗೆ ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು


14) ಕ್ರೀಡಾಕೂಟ ರಾಜ್ಯೋತ್ಸವ, ಗಡಿನಾಡ ಕನ್ನಡ ಉತ್ಸವ, ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಪ್ರತ್ಯೇಕ ಲೆಕ್ಕಪತ್ರ, ಬಳಕೆ ಪ್ರಮಾಣ ಕುರಿತು ಯಾವುದೇ ವಾರ್ಷಿಕ ವರದಿಗಳಲ್ಲಿ ಅಥವಾ ಸರಕಾರಕ್ಕೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿರುವುದು


15) ಬೈಲಾ ತಿದ್ದುಪಡಿಗಾಗಿ ಕರೆಯಲಾದ ದಿನಾಂಕ 11.10.2020ರ ಸರ್ವ ಸದಸ್ಯರ ವಿಶೇಷ ಮಹಾ ಸಭೆಯು ಕಾನೂನುಬಾಹಿರ ಪ್ರಕ್ರಿಯೆ ಒಳಗೊಂಡಿರುವುದಾಗಿ ರಿಟ್ ಅರ್ಜಿ 12863/2021 ರಲ್ಲಿ ಸಂಘವು ಸ್ವತಃ ಉಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿರುವುದರಿಂದ ಮತ್ತು ಈ ಪ್ರಕರಣವನ್ನು ಅರ್ಜಿದಾರರ ಪರವಾಗಿ ತೀರ್ಮಾನಗೊಂಡಿರುವುದರಿಂದ ಈ ಸಭೆಯಲ್ಲಿನ ಎಲ್ಲಾ ನಿರ್ಣಯಗಳು ಸ್ಥಾಪಿತ ನ್ಯಾಯದಂತೆ ಸ್ವಯಂ ಅಸಿಂಧುಗೊಂಡು ಅನೂರ್ಜಿತಗೊಂಡಿರುವುದರಿಂದ 2019-20ರ ಸಾಲಿನ ಲೆಕ್ಕಪತ್ರ ಅನುಮೋದನೆ ಪಡೆದಿರುವುದಾಗಿ ನೊಂದಾಯಿಸಿರುವುದು ನಿಯಮಬಾಹಿರವಾಗಿದೆ.


ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯವೈಖರಿ ಮಾದರಿಯಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಈ ಸಂಸ್ಥೆಯ ಅವ್ಯವಹಾರಗಳ ಕುರಿತು ಕರ್ನಾಟಕ ಹೈ ಕೋರ್ಟ್ ನ ಆದೇಶದಂತೆ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 25ರ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅವ್ಯವಹಾರಗಳ ಕುರಿತು ನಡೆಸಿರುವ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.


ಶ್ರೀ ಬಿ. ಗಂಗಾಧರ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಜಂಟಿ ನಿಬಂಧಕರು ವಿಚಾರಣೆಯನ್ನು ಕೈಗೊಂಡಿದ್ದು ದಿನಾಂಕ 29.12.2025ರಂದು ವಿಚಾರಣೆಗೆ ಹಾಜರಾಗುವಂತೆ ಶ್ರೀ ಶಶಿಧರ್ ಪಿ ಅವರಿಗೆ ನೋಟಿಸು ಜಾರಿ ಮಾಡಲಾಗಿತ್ತು. ಶ್ರೀ ಶಶಿಧರ್ ಪಿ ಅವರು ಸಮಯಾವಕಾಶ ಕೋರಿದ ಮೇರೆಗೆ ವಿಚಾರಣೆಯನ್ನು ದಿನಾಂಕ 17.1.2026 ಕ್ಕೆ ಮುಂದೂಡಲಾಗಿದೆ.


ಸಂಘದ ರಾಜ್ಯ ಪರಿಷತ್ ಸದಸ್ಯ ಅಥವಾ ಪದನಿಮಿತ್ತ ಸದಸ್ಯರಿಗೆ ಮಾತ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹತೆ ಇದೆ. ಈ ಎರಡು ಅರ್ಹತೆಗಳನ್ನು ಹೊಂದಿರದೆ ಇದ್ದರೂ ಷಡಕ್ಷರಿ ಅವರು 2025 ರಿಂದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿಡಂಬನೆಯಾಗಿದೆ ಹಾಗೂ ಸಂಘದ ವ್ಯವಹಾರಗಳು ಕಾನೂನು ಬದ್ಧವಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿದೆ.


Ads on article

Advertise in articles 1

advertising articles 2

Advertise under the article