-->
ನ್ಯಾಯಾಧೀಶರು ಸಾರ್ವಜನಿಕ ಅಭಿಯೋಜಕರ ಪಾತ್ರ ವಹಿಸಿಕೊಳ್ಳಲು ಸಾಧ್ಯವಿಲ್ಲ: ಜೀವಾವಧಿ ಶಿಕ್ಷೆ ರದ್ದುಪಡಿಸಿದ ಕೇರಳ ಹೈಕೋರ್ಟ್

ನ್ಯಾಯಾಧೀಶರು ಸಾರ್ವಜನಿಕ ಅಭಿಯೋಜಕರ ಪಾತ್ರ ವಹಿಸಿಕೊಳ್ಳಲು ಸಾಧ್ಯವಿಲ್ಲ: ಜೀವಾವಧಿ ಶಿಕ್ಷೆ ರದ್ದುಪಡಿಸಿದ ಕೇರಳ ಹೈಕೋರ್ಟ್

ನ್ಯಾಯಾಧೀಶರು ಸಾರ್ವಜನಿಕ ಅಭಿಯೋಜಕರ ಪಾತ್ರ ವಹಿಸಿಕೊಳ್ಳಲು ಸಾಧ್ಯವಿಲ್ಲ: ಜೀವಾವಧಿ ಶಿಕ್ಷೆ ರದ್ದುಪಡಿಸಿದ ಕೇರಳ ಹೈಕೋರ್ಟ್





ನ್ಯಾಯಾಧೀಶರು ವಕೀಲರ ಅಧಿಕಾರವನ್ನು ಕಸಿದುಕೊಂಡು ಸಾರ್ವಜನಿಕ ಅಭಿಯೋಜಕರ (Public Prosecutor) ಪಾತ್ರವನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕೇರಳ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ರಾಜ ವಿಜಯರಾಘವನ್ ವಿ ಮತ್ತು ಶ್ರೀ ಕೆ.ವಿ. ಜಯಕುಮಾರ್ ಅವರಿದ್ದ ದ್ವಿಸದಸ್ಯ ನ್ಯಾಯಪೀಠವು, ಕೊಲೆ ಪ್ರಕರಣದಲ್ಲಿ ದೋಷಾರೋಪಣೆಗೆ ಒಳಗಾಗಿದ್ದ ಆರೋಪಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.


ನ್ಯಾಯಸಮ್ಮತ ವಿಚಾರಣೆಯ ಸಂವಿಧಾನಾತ್ಮಕ ಹಕ್ಕನ್ನು (Fair Trial) ಗಂಭೀರವಾಗಿ ನಿರಾಕರಿಸಿದ ಕಾರಣದಿಂದ ಸಂಪೂರ್ಣ ವಿಚಾರಣೆಯೇ ದೋಷಪೂರ್ಣವಾಗಿದೆ ಎಂದು ನ್ಯಾಯಪೀಠ ತೀರ್ಮಾನಿಸಿದೆ.


ಅಸಮರ್ಥ ಮತ್ತು ಅಸಂಗತ ಕಾನೂನು ನೆರವು, ವಿಚಾರಣೆಯಲ್ಲಿ ಉಂಟಾದ ದೀರ್ಘ ವಿಳಂಬ, ಹಾಗೂ ವಿಚಾರಣಾ ನ್ಯಾಯಾಧೀಶರು ಸ್ವತಃ ಅಭಿಯೋಜಕರ ಪಾತ್ರ ವಹಿಸಿಕೊಂಡಿರುವುದು ಸಂವಿಧಾನದ ಕಲಂ 21 ಅಡಿಯಲ್ಲಿ ಭದ್ರಪಡಿಸಲಾದ ನ್ಯಾಯಸಮ್ಮತ ಪ್ರಕ್ರಿಯೆಯ ಮೂಲವನ್ನೇ ಕುಸಿತಗೊಳಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.


ಈ ತೀರ್ಪು, ಐಪಿಸಿ ಸೆಕ್ಷನ್‌ಗಳು 302 ಮತ್ತು 324 ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದ ಏಕೈಕ ಆರೋಪಿಯು ಸಲ್ಲಿಸಿದ ಮೇಲ್ಮನವಿಯ ಮೇಲೆ ನೀಡಲಾಗಿದೆ.


ಅಭಿಯೋಗದ ಪ್ರಕಾರ, 2011ರ ಸೆಪ್ಟೆಂಬರ್‌ನಲ್ಲಿ, ಕುನ್ನೆಲ್ಪೀಡಿಕಾದ ರಾಯಲ್ ಕಿಂಗ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಓಣಂ ಆಚರಣೆಯ ಸಂದರ್ಭದಲ್ಲಿ, ಕಾರ್ಡ್ ಆಟ ಆಡುತ್ತಿದ್ದ ವೇಳೆ ಉಂಟಾದ ಜಗಳದಲ್ಲಿ ಆರೋಪಿಯು ಒಬ್ಬ ವ್ಯಕ್ತಿಗೆ ಚೂರಿಯಿಂದ ಇರಿದಿದ್ದಾನೆ ಎಂಬುದು ಆರೋಪವಾಗಿತ್ತು. ವಿಚಾರಣೆ ಅಕ್ಟೋಬರ್ 2019ರಲ್ಲಿ ಪೂರ್ಣಗೊಂಡಿತ್ತು.


ಸೆಷನ್ಸ್ ನ್ಯಾಯಾಲಯವು ಆರೋಪಿಯನ್ನು ದೋಷಿಯಾಗಿ ಘೋಷಿಸಿ, ಜೀವಾವಧಿ ಶಿಕ್ಷೆ ಹಾಗೂ ರೂ. 50,000 ದಂಡ ವಿಧಿಸಿತ್ತು.


ಈ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿಯಲ್ಲಿ, ಸಾಕ್ಷ್ಯಗಳನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡದೆ ದೋಷಾರೋಪಣೆ ಮಾಡಲಾಗಿದೆ ಎಂದು ವಾದಿಸಲಾಯಿತು. ಅಲ್ಲದೆ, ಆರೋಪಿಗೆ ಸಮರ್ಥ ವಕೀಲರ ಪ್ರತಿನಿಧಿತ್ವ ದೊರಕಿರಲಿಲ್ಲ ಹಾಗೂ ಪ್ರಮುಖ ಸಾಕ್ಷಿಗಳನ್ನು ಆರೋಪಿಯೇ ಸ್ವತಃ ಪಾಟೀ ಸವಾಲು (cross-examination) ಮಾಡಲು ಅವಕಾಶ ನೀಡಲಾಗಿದ್ದು, ಇದರಿಂದ ಅವನ ಅಭಿರಕ್ಷೆಯ ಹಕ್ಕಿಗೆ ಗಂಭೀರ ಹಾನಿಯಾಗಿದೆ ಎಂದು ತಿಳಿಸಲಾಯಿತು.


ನ್ಯಾಯಾಲಯವು, ಕೆಲವು ಸಾಕ್ಷಿಗಳನ್ನು ಸಾರ್ವಜನಿಕ ಅಭಿಯೋಜಕರ ಅನುಪಸ್ಥಿತಿಯಲ್ಲಿ ಸೆಷನ್ಸ್ ನ್ಯಾಯಾಧೀಶರು ವಿಚಾರಣೆಗೊಳಪಡಿಸಿದ್ದಾರೆ ಎಂಬುದನ್ನೂ ಗಮನಿಸಿದೆ.


“ಮಾನ್ಯ ಸೆಷನ್ಸ್ ನ್ಯಾಯಾಧೀಶರ ವಿಧಾನವು ಕಾನೂನುಬಾಹಿರ ಹಾಗೂ ಅನ್ಯಾಯಯುತವಾಗಿದೆ. ಅಭಿಯೋಗ ಮತ್ತು ಎದುರು ಪಕ್ಷಕಾರರಿಗೆ ತಮ್ಮ ವಾದವನ್ನು ಸಾಬೀತುಪಡಿಸಲು ಸಮಾನ ಅವಕಾಶ ನೀಡಬೇಕೆಂಬುದು ಸ್ಥಿರವಾದ ಕಾನೂನು ತತ್ವವಾಗಿದೆ. ಆದರೆ ಇಲ್ಲಿ ಸೆಷನ್ಸ್ ನ್ಯಾಯಾಧೀಶರು ಸ್ವತಃ ಸಾರ್ವಜನಿಕ ಅಭಿಯೋಜಕರ ಪಾತ್ರ ವಹಿಸಿಕೊಂಡು ಮುಖ್ಯ ಪರೀಕ್ಷೆಯನ್ನು ನಡೆಸಿದ್ದಾರೆ. ಇದು ನ್ಯಾಯಾಲಯಕ್ಕೆ ನೀಡಲಾದ ಅಧಿಕಾರದ ಮಿತಿಯನ್ನು ಮೀರುವುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.


ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 165 ಅಡಿಯಲ್ಲಿ ಸತ್ಯ ಹೊರತೆಗೆಯಲು ನ್ಯಾಯಾಧೀಶರು ಸಾಕ್ಷಿಗಳಿಗೆ ಪ್ರಶ್ನೆ ಕೇಳಬಹುದಾದರೂ, “ಸಾರ್ವಜನಿಕ ಅಭಿಯೋಜಕರ ಅಧಿಕಾರವನ್ನು ಕಸಿದುಕೊಂಡು ಅವರ ಪಾತ್ರವನ್ನು ನ್ಯಾಯಾಧೀಶರು ವಹಿಸಿಕೊಳ್ಳುವುದು ಅನುಮತಿಸಲ್ಪಟ್ಟುದಲ್ಲ,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


ಈ ಸಂಬಂಧ Ram Chander v. State of Haryana [1981 KHC 626] ಪ್ರಕರಣವನ್ನು ಉಲ್ಲೇಖಿಸಿ, ಪ್ರಶ್ನೆ ಕೇಳುವ ಸಂದರ್ಭದಲ್ಲಿ ನ್ಯಾಯಾಲಯವು ಅಭಿಯೋಜಕರ ಪಾತ್ರ ವಹಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ನ್ಯಾಯಾಲಯ ಸ್ಮರಿಸಿದೆ.


ಅಲ್ಲದೆ, ಆರೋಪಿಯು ತನ್ನ ಆಯ್ಕೆಯ ವಕೀಲನ ಸಹಾಯವಿಲ್ಲದೆ ಅಥವಾ ನ್ಯಾಯಾಲಯ ನೇಮಿಸಿದ ಕಾನೂನು ನೆರವು ವಕೀಲನ ಸಹಾಯವಿಲ್ಲದೆ ಸ್ವತಃ ಪ್ರತಿಪ್ರಶ್ನೆ ನಡೆಸಬೇಕಾದ ಪರಿಸ್ಥಿತಿ ಉಂಟಾಗಿ, ಇದರಿಂದ ಅವನ ರಕ್ಷಣಾ ಹಕ್ಕಿಗೆ ಭಾರೀ ಹಾನಿಯಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.


“ಆರೋಪಿಯನ್ನು ಸಮರ್ಥ ವಕೀಲರಿಂದ ಪ್ರತಿನಿಧಿಸಲಾಗುವಂತೆ ಖಚಿತಪಡಿಸಿಕೊಳ್ಳಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ. ಇದು ಉಚ್ಚ ನ್ಯಾಯಾಲಯ ನೀಡಿದ ನಿರ್ದೇಶನಗಳನ್ನು ನಿರ್ಲಕ್ಷಿಸಿರುವುದಾಗಿದೆ,” ಎಂದು ನ್ಯಾಯಾಲಯ ಹೇಳಿದೆ.


ನ್ಯಾಯಾಲಯವು, ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ಆರೋಪಿಯ ಅನುಪಸ್ಥಿತಿಯಲ್ಲಿ ದಾಖಲಿಸಿರುವುದನ್ನು ಗಮನಿಸಿ, ಇದು CrPC ಸೆಕ್ಷನ್ 273ಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಸಾಕ್ಷ್ಯವನ್ನು ಆರೋಪಿಯ ಸಮ್ಮುಖದಲ್ಲಿಯೇ ದಾಖಲಿಸಬೇಕು.


ಭಾರತ ಸಂವಿಧಾನದ ಕಲಂಗಳು 21, 22 ಮತ್ತು 39A ಗಳನ್ನು ಪರಿಶೀಲಿಸಿದ ನ್ಯಾಯಾಲಯ, ಸೆಷನ್ಸ್ ನ್ಯಾಯಾಲಯದ ವಿಚಾರಣೆಯ ಮಹತ್ವವನ್ನು ಒತ್ತಿಹೇಳಿದ್ದು, ಏಕೆಂದರೆ ಸೆಷನ್ಸ್ ನ್ಯಾಯಾಧೀಶರಿಗೆ ಜೀವಾವಧಿ ಅಥವಾ ಮರಣದಂಡನೆ ವಿಧಿಸುವ ಅಧಿಕಾರವಿದೆ ಎಂದು ತಿಳಿಸಿದೆ.


Hussainara Khatoon v. State of Bihar [AIR 1979 SC 1369 ಪ್ರಕರಣವನ್ನು ಉಲ್ಲೇಖಿಸಿ, ಉಚಿತ ಕಾನೂನು ನೆರವು ಕಲಂ 21 ಅಡಿಯಲ್ಲಿ ಭದ್ರಪಡಿಸಲಾದ “ನ್ಯಾಯಸಮ್ಮತ, ಯುಕ್ತ ಹಾಗೂ ಸಮಾನ ನ್ಯಾಯ ಪ್ರಕ್ರಿಯೆಯ” ಅವಿಭಾಜ್ಯ ಅಂಗವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ನ್ಯಾಯಾಲಯ ಪುನರುಚ್ಚರಿಸಿದೆ.


ಹಾಗೆಯೇ Dashwanth v. State of Tamil Nadu [2025 SCC OnLine 2186] ಸೇರಿದಂತೆ ಇತರ ತೀರ್ಪುಗಳನ್ನು ಉಲ್ಲೇಖಿಸಿ, ಆರೋಪಿಗೆ ನೀಡಲ್ಪಡುವ ರಕ್ಷಣಾ ಹಕ್ಕು ಕೇವಲ ತಾತ್ವಿಕವಲ್ಲ; ಅದು ಪರಿಣಾಮಕಾರಿಯಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.


ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, 26.07.2012 ರಂದು ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ತೀರ್ಪು 16.10.2019 ರಂದು ಪ್ರಕಟವಾಗಿರುವುದನ್ನು ಗಮನಿಸಿದೆ. ಈ ಏಳು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಆರೋಪಿಯು ನಿರಂತರವಾಗಿ ನ್ಯಾಯಾಂಗ ಬಂಧನದಲ್ಲೇ ಇದ್ದನು.


ಜಾಮೀನು ಮಂಜೂರಾದರೂ ಕೂಡ, ಆರೋಪಿಯನ್ನು ಬಿಡುಗಡೆ ಮಾಡದಿರುವ ಕಾರಣ ದಾಖಲೆಗಳಲ್ಲಿ ಸ್ಪಷ್ಟವಾಗಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. 2012 ರಿಂದ 2014ರ ನಡುವೆ ಅನೇಕ ಬಾರಿ ವಿಚಾರಣೆ ಮುಂದೂಡಲಾಗಿದೆ.


ವಿಚಾರಣೆ ಹಂತ ಹಂತವಾಗಿ (piecemeal) ನಡೆದಿದ್ದು, ಆರೋಪಿಯು 14 ವರ್ಷಗಳಷ್ಟು ಕಾಲ ತನಿಖೆ, ವಿಚಾರಣೆ, ನ್ಯಾಯಾಲಯದ ವಿಚಾರಣೆ ಹಾಗೂ ಮೇಲ್ಮನವಿ ಅವಧಿಯಲ್ಲಿ ಸ್ವಾತಂತ್ರ್ಯ ಕಳೆದುಕೊಂಡಿದ್ದುದನ್ನು ಗಮನಿಸಿ, ಮರುವಿಚಾರಣೆ (de-novo trial) ನಡೆಸುವಂತೆ ನ್ಯಾಯಾಲಯ ಆದೇಶಿಸಲಿಲ್ಲ.


ಈ ಎಲ್ಲಾ ಅಂಶಗಳ ಸಮಗ್ರ ಪರಿಣಾಮದಿಂದ ದೋಷಾರೋಪಣೆ ಸುರಕ್ಷಿತವಲ್ಲ ಎಂದು ತೀರ್ಮಾನಿಸಿದ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ ಆರೋಪಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.


ಪ್ರಕರಣ ಶೀರ್ಷಿಕೆ: Babu C G v. State of Kerala

ಪ್ರಕರಣ ಸಂಖ್ಯೆ: Crl. A No. 740/2020


Ads on article

Advertise in articles 1

advertising articles 2

Advertise under the article