-->
RTI ಕಾಯ್ದೆ: ಕೆಳ ನ್ಯಾಯಾಂಗದ ವಿರುದ್ಧದ ದೂರುಗಳ ಮಾಹಿತಿಯನ್ನು ಬಹಿರಂಗಪಡಿಸಲು ಉತ್ತರಾಖಂಡ್ ರಾಜ್ಯ ಮಾಹಿತಿ ಆಯೋಗದ ಆದೇಶ

RTI ಕಾಯ್ದೆ: ಕೆಳ ನ್ಯಾಯಾಂಗದ ವಿರುದ್ಧದ ದೂರುಗಳ ಮಾಹಿತಿಯನ್ನು ಬಹಿರಂಗಪಡಿಸಲು ಉತ್ತರಾಖಂಡ್ ರಾಜ್ಯ ಮಾಹಿತಿ ಆಯೋಗದ ಆದೇಶ

RTI ಕಾಯ್ದೆ: ಕೆಳ ನ್ಯಾಯಾಂಗದ ವಿರುದ್ಧದ ದೂರುಗಳ ಮಾಹಿತಿಯನ್ನು ಬಹಿರಂಗಪಡಿಸಲು ಉತ್ತರಾಖಂಡ್ ರಾಜ್ಯ ಮಾಹಿತಿ ಆಯೋಗದ ಆದೇಶ





ಈ ನಿರ್ದೇಶನವು, ದೇಶದಲ್ಲೇ ಮೊದಲ ಬಾರಿಗೆ ಕೆಳ ನ್ಯಾಯಾಂಗದ ವಿರುದ್ಧ ದಾಖಲಾದ ದೂರುಗಳಿಗೆ ಸಂಬಂಧಿಸಿದ ವಿವರವಾದ ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸಲು ಆದೇಶಿಸಿರುವ ಮಹತ್ವದ ನಿರ್ಧಾರವಾಗಿದೆ.


ಭಾರತದಾದ್ಯಂತ ನ್ಯಾಯಾಂಗ ಪಾರದರ್ಶಕತೆಯ ದೃಷ್ಟಿಯಿಂದ ಮಹತ್ವದ ಮಾದರಿಯಾಗುವ ಸಾಧ್ಯತೆ ಇರುವ ನಿರ್ಧಾರವೊಂದರಲ್ಲಿ, ಉತ್ತರಾಖಂಡ್ ರಾಜ್ಯ ಮಾಹಿತಿ ಆಯೋಗವು, ಮಾಹಿತಿ ಹಕ್ಕು ಕಾಯ್ದೆ, 2005ರ ಅಡಿಯಲ್ಲಿ, ಕೆಳ ನ್ಯಾಯಾಂಗದ ಅಧಿಕಾರಿಗಳು ಹಾಗೂ ನ್ಯಾಯಾಧೀಶರ ವಿರುದ್ಧ ಸಲ್ಲಿಸಲಾದ ದೂರುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಲು ನಿರ್ದೇಶಿಸಿದೆ.


ಮುಖ್ಯ ಮಾಹಿತಿ ಆಯುಕ್ತರಾದ ರಾಧಾ ರತೂರಿ ಅವರ ಅಧ್ಯಕ್ಷತೆಯಲ್ಲಿ ಹೊರಡಿಸಲಾದ ಈ ಆದೇಶವು, ದೇಶದಲ್ಲೇ ಮೊದಲ ಬಾರಿಗೆ ಕೆಳ ನ್ಯಾಯಾಂಗದ ವಿರುದ್ಧದ ದೂರುಗಳ ಕುರಿತು ಇಂತಹ ವಿವರವಾದ ಅಂಕಿಅಂಶಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿಸಲು ಸೂಚಿಸಿರುವ ಉದಾಹರಣೆಯಾಗಿದೆ.


ಈ ಪ್ರಕರಣವು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 19(3) ಅಡಿಯಲ್ಲಿ ಐಎಫ್‌ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ ಅವರು ಸಲ್ಲಿಸಿದ ಮೇಲ್ಮನವಿಯಿಂದ ಉದ್ಭವಿಸಿದೆ.


ಚತುರ್ವೇದಿ ಅವರು, ಕೆಳ ನ್ಯಾಯಾಂಗಕ್ಕೆ ಅನ್ವಯಿಸುವ ಸೇವಾ ನಿಯಮಗಳು ಹಾಗೂ ನಡವಳಿಕೆ ನಿಯಮಗಳು, ಶಿಸ್ತು ಕ್ರಮಗಳ ವಿಧಾನಗಳು, ಭ್ರಷ್ಟಾಚಾರ ಅಥವಾ ದುರುಪಯೋಗಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುವ ವ್ಯವಸ್ಥೆಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೋರಿದ್ದರು.


ಮೇ 14, 2025 ರಂದು ಚತುರ್ವೇದಿ ಸಲ್ಲಿಸಿದ ಮೂಲ RTI ಅರ್ಜಿಯಲ್ಲಿ, ಉತ್ತರಾಖಂಡ್ ಕೆಳ ನ್ಯಾಯಾಂಗಕ್ಕೆ ಅನ್ವಯಿಸುವ ಸೇವಾ ಹಾಗೂ ನಡವಳಿಕೆ ನಿಯಮಗಳು, ನ್ಯಾಯಾಂಗ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುವ ಸ್ಥಾಪಿತ ಪ್ರಕ್ರಿಯೆ, ಜನವರಿ 1, 2020 ರಿಂದ ಏಪ್ರಿಲ್ 15, 2025 ರವರೆಗೆ ಕೆಳ ನ್ಯಾಯಾಂಗ ಸದಸ್ಯರ ವಿರುದ್ಧ ದಾಖಲಾದ ಒಟ್ಟು ದೂರುಗಳ ಸಂಖ್ಯೆ, ಅವಕ್ಕೆ ಸಂಬಂಧಿಸಿದಂತೆ ಶಿಫಾರಸು ಮಾಡಲಾದ ಅಥವಾ ಜಾರಿಗೆ ತರಲಾದ ಶಿಸ್ತು ಕ್ರಮಗಳು ಅಥವಾ ಕ್ರಿಮಿನಲ್ ಕ್ರಮಗಳ ವಿವರಗಳು, ಹಾಗು RTI ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಕಡತ ಟಿಪ್ಪಣಿಗಳ ಪ್ರಮಾಣಿತ ಪ್ರತಿಗಳನ್ನು ಅವರು ವಿಶೇಷವಾಗಿ ಕೋರಿದ್ದರು.


ಆದರೆ, ನೈನಿತಾಲ್ ಹೈಕೋರ್ಟ್‌ನ ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ಅವರು, ಕೋರಲಾದ ಮಾಹಿತಿಯು “ಗೌಪ್ಯ ಸ್ವಭಾವದದ್ದು” ಆಗಿದ್ದು, “ಮೂರನೇ ವ್ಯಕ್ತಿಗೆ ಸಂಬಂಧಪಟ್ಟದ್ದು” ಎಂಬ ಕಾರಣ ನೀಡಿ, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯವಿದೆ ಎಂದು ಹೇಳಿ ಸಂಪೂರ್ಣ ಮಾಹಿತಿಯನ್ನು ನೀಡಲು ನಿರಾಕರಿಸಿದರು.


ಈ ಉತ್ತರದಿಂದ ಅಸಮಾಧಾನಗೊಂಡ ಚತುರ್ವೇದಿ ಅವರು ಮೊದಲು ಉತ್ತರಾಖಂಡ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಮುಂದೆ ಇಲಾಖಾ ಮೇಲ್ಮನವಿ ಸಲ್ಲಿಸಿದರು. ಬಳಿಕ ವಿಷಯವನ್ನು ರಾಜ್ಯ ಮಾಹಿತಿ ಆಯೋಗದ ಮುಂದೆ ತೆಗೆದುಕೊಂಡು ಹೋದರು.


ರಾಜ್ಯ ಮಾಹಿತಿ ಆಯೋಗದ ವಿಚಾರಣೆಯ ವೇಳೆ, ಎರಡೂ ಪಕ್ಷಗಳು ತಮ್ಮ ವಾದಗಳನ್ನು ಮಂಡಿಸಿದವು.


ಚತುರ್ವೇದಿ ಅವರು, ಕೆಳ ನ್ಯಾಯಾಂಗದ ವಿರುದ್ಧ ದಾಖಲಾಗಿರುವ ದೂರುಗಳ ಸಂಖ್ಯೆ ಮತ್ತು ಅವುಗಳ ವಿಲೇವಾರಿ ಸಂಬಂಧಿಸಿದ ಅಂಕಿಅಂಶಗಳು ಸಾರ್ವಜನಿಕ ಹಿತಾಸಕ್ತಿಗೆ ಅತ್ಯಂತ ಅಗತ್ಯವಾಗಿದ್ದು, ಅವುಗಳನ್ನು ಗೌಪ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.


ಇದಕ್ಕೆ ಪ್ರತಿಯಾಗಿ, ಸಾರ್ವಜನಿಕ ಮಾಹಿತಿ ಅಧಿಕಾರಿ ಅವರು, ನ್ಯಾಯಾಂಗ ಅಧಿಕಾರಿಗಳ ಕುರಿತು ಇರುವ ಸಂವೇದನಾಶೀಲತೆಯ ಹಿನ್ನೆಲೆಯಲ್ಲಿ ಸ್ಪಷ್ಟ ಅನುಮತಿ ಇಲ್ಲದೆ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.


ಆದರೆ ತನ್ನ ಆದೇಶದಲ್ಲಿ, ರಾಜ್ಯ ಮಾಹಿತಿ ಆಯೋಗವು ಕೇವಲ ಗೌಪ್ಯತೆ ಎಂದು ಉಲ್ಲೇಖಿಸುವುದೇ ಮಾಹಿತಿ ನೀಡಲು ನಿರಾಕರಿಸಲು ಸಾಕಷ್ಟು ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ.


ಕೆಳ ನ್ಯಾಯಾಂಗದಲ್ಲಿ ದಾಖಲಾಗುವ ದೂರುಗಳ ಪ್ರಮಾಣ ಹಾಗೂ ಅವುಗಳ ನಿರ್ವಹಣೆಯ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿ ಪಾರದರ್ಶಕತೆಯ ವ್ಯಾಪ್ತಿಗೆ ಬರುತ್ತದೆ ಎಂದು ಆಯೋಗವು ಒಪ್ಪಿಕೊಂಡಿದೆ.


“ಮಾಹಿತಿ ಗೌಪ್ಯವಾಗಿದೆ ಎಂದು ಸರಳವಾಗಿ ಹೇಳುವುದರಿಂದ ಅದನ್ನು ಮರೆಮಾಚಲು ಸಾಧ್ಯವಿಲ್ಲ,” ಎಂದು ಆಯೋಗವು ಗಮನಾರ್ಹವಾಗಿ ಹೇಳಿದ್ದು, ಪ್ರಕ್ರಿಯಾತ್ಮಕ ಪಾರದರ್ಶಕತೆ ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದೆ.


ಆದರೆ, ಆಯೋಗವು ಒಂದು ಪ್ರಮುಖ ಎಚ್ಚರಿಕೆಯನ್ನು ನೀಡಿದೆ: “ಯಾವುದೇ ವೈಯಕ್ತಿಕ ನ್ಯಾಯಾಧೀಶ ಅಥವಾ ಅಧಿಕಾರಿಯ ಗುರುತು ಅಥವಾ ಹೆಸರನ್ನು ಬಹಿರಂಗಪಡಿಸಬಾರದು.”


ಅದರಂತೆ, ದೂರುಗಳ ಸಂಖ್ಯೆ ಹಾಗೂ ಅವುಗಳ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು, ಸಕ್ಷಮ ಪ್ರಾಧಿಕಾರವಾದ ಕೆಳ ನ್ಯಾಯಾಲಯಗಳಿಂದ ಅಗತ್ಯ ಮಾಹಿತಿಯನ್ನು ಒಂದು ತಿಂಗಳೊಳಗೆ ಪಡೆದುಕೊಳ್ಳುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಆಯೋಗವು ನಿರ್ದೇಶಿಸಿದೆ.


ಕಾನೂನು ತಜ್ಞರು, ಈ ತೀರ್ಪನ್ನು ನ್ಯಾಯಾಂಗ ಆಡಳಿತ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ತೆಗೆದುಕೊಳ್ಳಲಾದ ಮಹತ್ವದ ಹೆಜ್ಜೆ ಎಂದು ಅಭಿಪ್ರಾಯಪಟ್ಟಿದ್ದು, ಭವಿಷ್ಯದಲ್ಲಿ ನ್ಯಾಯಾಂಗ ಮೇಲ್ವಿಚಾರಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು RTI ಅರ್ಜಿದಾರರಿಗೆ ಇದು ಬಲವಾದ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article