-->
ಅಂಧಶ್ರದ್ಧೆ ಆಧಾರದಲ್ಲಿ ಕ್ರಮ ಸಾಧುವಲ್ಲ: ಅಸಹಜ ಸಾವಿಗೆ ವಿಗ್ರಹ ಕಾರಣ ಎಂದು ತೆರವು ಮಾಡಿದ ಅಧಿಕಾರಿಗಳ ಕ್ರಮಕ್ಕೆ ಹೈಕೋರ್ಟ್‌ ಅಸಮಾಧಾನ

ಅಂಧಶ್ರದ್ಧೆ ಆಧಾರದಲ್ಲಿ ಕ್ರಮ ಸಾಧುವಲ್ಲ: ಅಸಹಜ ಸಾವಿಗೆ ವಿಗ್ರಹ ಕಾರಣ ಎಂದು ತೆರವು ಮಾಡಿದ ಅಧಿಕಾರಿಗಳ ಕ್ರಮಕ್ಕೆ ಹೈಕೋರ್ಟ್‌ ಅಸಮಾಧಾನ

ಅಂಧಶ್ರದ್ಧೆ ಆಧಾರದಲ್ಲಿ ಕ್ರಮ ಸಾಧುವಲ್ಲ: ಅಸಹಜ ಸಾವಿಗೆ ವಿಗ್ರಹ ಕಾರಣ ಎಂದು ತೆರವು ಮಾಡಿದ ಅಧಿಕಾರಿಗಳ ಕ್ರಮಕ್ಕೆ ಹೈಕೋರ್ಟ್‌ ಅಸಮಾಧಾನ





ಅಂಧಶ್ರದ್ಧೆ ಆಧಾರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅಸಹಜ ಸಾವಿಗೆ ವಿಗ್ರಹ ಕಾರಣ ಎಂದು ತೆರವು ಮಾಡಿದ ಅಧಿಕಾರಿಗಳ ಕ್ರಮಕ್ಕೆ ಮದ್ರಾಸ್ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.


ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಭರತ್ ಚಕ್ರವರ್ತಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಸಮಾಧಾನ ವ್ಯಕ್ತಪಡಿಸಿದ್ದು, ಅಂಧಶ್ರದ್ಧೆಗಳ ಆಧಾರದಲ್ಲಿ ರಾಜ್ಯ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.


ಸ್ಥಳೀಯ ಪ್ರದೇಶಗಳಲ್ಲಿ ಅಸಹಜ ಸಾವುಗಳಿಗೆ ಕಾರಣವೆಂದು ಆರೋಪಿಸಿ ಖಾಸಗಿ ಮನೆಯಿಂದ ವಿಗ್ರಹಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಬಾಧಿತರು ಹೈಕೋರ್ಟ್ ಮೆಟ್ಟಿಲೇರಿದ್ದರು.


ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ದೇವರು ಅಥವಾ ವಿಗ್ರಹವು ಯಾವುದೇ ವ್ಯಕ್ತಿಗೆ ಹಾನಿ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸ್ಥಳೀಯ ಪ್ರದೇಶಗಳಲ್ಲಿ ಅಸಹಜ ಸಾವುಗಳಿಗೆ ಕಾರಣವಾಗಿದೆ ಎಂಬ ಆರೋಪದ ಮೇರೆಗೆ, ವ್ಯಕ್ತಿಯ ಮನೆಯಿಂದ ವಿಗ್ರಹಗಳನ್ನು ತೆರವುಗೊಳಿಸಲು ಅಧಿಕಾರಿಗಳು ಅಂಧಶ್ರದ್ಧೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.


ವ್ಯಕ್ತಿಯೊಬ್ಬನು ತನ್ನ ಸ್ವಂತ ಆವರಣದಲ್ಲಿ ಯಾವುದೇ ವಿಗ್ರಹವನ್ನು ಇಟ್ಟುಕೊಂಡು, ಶಾಂತಿಯುತವಾಗಿ ಪೂಜೆ ಸಲ್ಲಿಸಬಹುದಾಗಿದೆ; ಇಚ್ಛಿಸುವ ಸ್ನೇಹಿತರನ್ನು ಅಥವಾ ನೆರೆಹೊರೆಯವರನ್ನು ಆಹ್ವಾನಿಸಿ ಪೂಜೆ ನಡೆಸುವುದಕ್ಕೂ ಅವಕಾಶವಿದೆ ಎಂದು ನ್ಯಾಯಪೀಠ ಆದೇಶಿಸಿತು. ಬಹುಮತದ ಬಲದ ಆಧಾರದ ಮೇಲೆ ಸಾರ್ವಜನಿಕರು ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ವಿಗ್ರಹಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಸ್ಪಷ್ಟಪಡಿಸಿತು.


ನ್ಯಾಯಾಲಯ ಹೀಗೆ ಹೇಳಿದೆ:

“ವ್ಯಕ್ತಿಯೊಬ್ಬನು ತನ್ನ ಸ್ವಂತ ಆವರಣದಲ್ಲಿ ಯಾವುದೇ ವಿಗ್ರಹವನ್ನು ಇಟ್ಟುಕೊಂಡು ಸ್ವತಃ ಅಥವಾ ಇಚ್ಛಿಸುವ ಸ್ನೇಹಿತರನ್ನೂ ನೆರೆಹೊರೆಯವರನ್ನೂ ಆಹ್ವಾನಿಸಿ ಶಾಂತಿಯುತವಾಗಿ ಪೂಜೆ ಸಲ್ಲಿಸಲು ಬಯಸಿದರೆ, ಸಾರ್ವಜನಿಕರು ಬಹುಮತದ ಬಲದ ಆಧಾರದ ಮೇಲೆ ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ.


ರಾಜ್ಯದ ಅಧಿಕಾರಿಗಳು ಇಂತಹ ಅಂಧಶ್ರದ್ಧೆಗಳು ಮತ್ತು ಸುಳ್ಳು ನಂಬಿಕೆಗಳಿಗೆ ಮಣಿಯಲು ಸಾಧ್ಯವಿಲ್ಲ. ದೇವರು ಅಥವಾ ವಿಗ್ರಹವು ಯಾವುದೇ ಮಾನವನಿಗೂ ಹಾನಿ ಮಾಡುವುದಿಲ್ಲ. ಇಂತಹ ನಂಬಿಕೆಗಳು ಕೇವಲ ಅಂಧಶ್ರದ್ಧೆಗಳಾಗಿದ್ದು, ಅವುಗಳನ್ನು ‘ಭಕ್ತಿ’ ಅಥವಾ ‘ವಿಜ್ಞಾನ’ದ ತತ್ವಗಳಿಗೆ ಹೊಂದಿಕೆಯಾಗಿವೆ ಎಂದು ಹೇಳಲಾಗುವುದಿಲ್ಲ,” ಎಂದು ನ್ಯಾಯಾಲಯ ತಿಳಿಸಿದೆ.


ಈ ಆದೇಶವನ್ನು, ಕಾರ್ತಿಕ್ ಎಂಬವರು ಸಲ್ಲಿಸಿದ ನ್ಯಾಯಾಂಗ ನಿಂದನೆ (contempt) ಅರ್ಜಿಯ ವಿಚಾರಣೆಯಲ್ಲಿ ನೀಡಲಾಗಿದೆ. ತಮ್ಮ ಮನೆಯಿಂದ ವಶಪಡಿಸಿಕೊಂಡ ವಿಗ್ರಹಗಳನ್ನು ಅಧಿಕಾರಿಗಳು ಹಸ್ತಾಂತರಿಸಿಲ್ಲವೆಂದು ಆರೋಪಿಸಿ ಕಾರ್ತಿಕ್ ಈ ಅರ್ಜಿ ಸಲ್ಲಿಸಿದ್ದರು. ಕಾರ್ತಿಕ್ ಅವರು ತಮ್ಮ ಆಸ್ತಿಯಲ್ಲಿ “ಶಿವಶಕ್ತಿ ದಕ್ಷಿಸ್ವರಿ” ದೇವಿಯ ವಿಗ್ರಹ ಹಾಗೂ “ವಿನಾಯಕ” ಮತ್ತು “ವೀರಭದ್ರ” ದೇವರ ವಿಗ್ರಹಗಳನ್ನು ಸ್ಥಾಪಿಸಿ, ತಮ್ಮ ಆವರಣದಲ್ಲಿ ಪೂಜೆ ನಡೆಸಲು ನೆರೆಹೊರೆಯವರು ಮತ್ತು ಇತರ ಭಕ್ತರನ್ನು ಆಹ್ವಾನಿಸಿದ್ದರು.


ಕಾರ್ತಿಕ್ ಅವರು, ವಿಗ್ರಹಗಳನ್ನು ಸ್ಥಾಪಿಸಿದ ನಂತರ ಸ್ಥಳೀಯ ಪ್ರದೇಶದಲ್ಲಿ ಅಸಹಜ ಸಾವುಗಳು ಸಂಭವಿಸಿದ್ದವೆಂದು ಆರೋಪಿಸಿ ಅಧಿಕಾರಿಗಳು ತಮ್ಮ ಆವರಣಕ್ಕೆ ಬಂದು ವಿಗ್ರಹಗಳನ್ನು ತೆಗೆದುಕೊಂಡು ಹೋದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು.


ಕಾರ್ತಿಕ್ ಮೊದಲ ಬಾರಿ ನ್ಯಾಯಾಲಯವನ್ನು ಸಂಪರ್ಕಿಸಿದಾಗ, ಈ ತೆರವು ಕಾನೂನು ಅಥವಾ ವಿಜ್ಞಾನಕ್ಕೆ ಬೆಂಬಲಿತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ವಿಗ್ರಹಗಳನ್ನು ಕಾರ್ತಿಕ್ ಅವರಿಗೆ ಹಿಂದಿರುಗಿಸುವಂತೆ ನಿರ್ದೇಶನ ನೀಡಿತ್ತು. ಈ ಆದೇಶ ಪಾಲನೆಯಾಗಿಲ್ಲವೆಂದು ಆರೋಪಿಸಿ ಕಾರ್ತಿಕ್ ಪ್ರಸ್ತುತ ನ್ಯಾಯಾಂಗ ನಿಂದನಾ ಅರ್ಜಿಯನ್ನು ಸಲ್ಲಿಸಿದ್ದರು.


ವಿಗ್ರಹಗಳನ್ನು ಇದುವರೆಗೆ ಹಸ್ತಾಂತರಿಸಿಲ್ಲ. ಜೊತೆಗೆ ವಿಗ್ರಹಗಳನ್ನು ಆವರಣದಲ್ಲಿ ಇಟ್ಟರೆ ತಮಗೆ ಹಲ್ಲೆ ನಡೆಸಲಾಗುವುದು ಹಾಗೂ ಕಟ್ಟಡವನ್ನು ಧ್ವಂಸಗೊಳಿಸಲಾಗುವುದು ಎಂದು ಸ್ಥಳೀಯ ಸಾರ್ವಜನಿಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾರ್ತಿಕ್ ತಮ್ಮ ಅರ್ಜಿಯಲ್ಲಿ ದೂರಿದ್ದರು.


ಪ್ರತಿವಾದಿಗಳು ಈ ಕೆಳಗಿನ ವಾದ ಮಂಡಿಸಿದರು.

ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಕಾರ್ತಿಕ್ ದೇವಸ್ಥಾನ ನಿರ್ಮಿಸಿಲ್ಲವಾದರೂ ಎಲ್ಲರಿಗೂ ಪೂಜೆ ಮಾಡಲು ಅವಕಾಶವಾಗುವ ರೀತಿಯಲ್ಲಿ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಮಧ್ಯರಾತ್ರಿಯಲ್ಲೂ ಪೂಜೆಗಳು ನಡೆಯುತ್ತಿದ್ದು, ಇದು ಸ್ಥಳೀಯ ಸಾರ್ವಜನಿಕರಿಗೆ ಅಶಾಂತಿ ಉಂಟುಮಾಡುತ್ತಿದೆ ಎಂದು ಪ್ರತಿವಾದಿ ಪರ ವಕೀಲರು ವಾದಿಸಿದರು.


ಕಾರ್ತಿಕ್ ಅವರು ಪ್ರತ್ಯೇಕ ದಾರಿಯನ್ನು ನಿರ್ಮಿಸಿದ್ದಾರೆ. ಹುಂಡಿಯ ಹಣವನ್ನೂ ಸಂಗ್ರಹಿಸುತ್ತಿದ್ದಾರೆ. ವಿಗ್ರಹಗಳನ್ನು ಇಡಲಾಗಿರುವ ಭೂಮಿ ಕಾರ್ತಿಕ್ ಅವರಿಗೆ ಸೇರಿದ ಆಸ್ತಿಯಲ್ಲ. ಅದು ಪೋರಂಬೋಕು ಜಮೀನಾಗಿದೆ ಎಂದು ಪ್ರತಿವಾದಿ ಪರ ವಾದ ಮಾಡಲಾಯಿತು.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ನ್ಯಾಯಾಲಯ ಈ ಕೆಳಗಿನ ಅಭಿಪ್ರಾಯ ವ್ಯಕ್ತಪಡಿಸಿತು;


ಯಾವುದೇ ನಿರ್ಮಾಣವು ಅನಧಿಕೃತವಾಗಿ ನಡೆದಿದ್ದರೆ, ಕಾನೂನಿನ ಪ್ರಕಾರ ಅಧಿಕಾರಿಗಳು ನೋಟಿಸ್ ನೀಡಬೇಕು ಮತ್ತು ಕಾನೂನಿನಡಿ ಅನುಮತಿಸಲ್ಪಟ್ಟ ಪ್ರತಿರಕ್ಷಣೆಯನ್ನು (defences) ಕಾರ್ತಿಕ್ ಅವರಿಗೆ ಮಂಡಿಸಲು ಅವಕಾಶ ನೀಡಬೇಕು.


ಸ್ಥಳೀಯ ಸಾರ್ವಜನಿಕರಿಗೆ ಅಶಾಂತಿ ಉಂಟುಮಾಡುವ ರೀತಿಯಲ್ಲಿ ಪೂಜೆ ನಡೆಯುತ್ತಿದ್ದರೆ, ದೂರು ಸ್ವೀಕರಿಸಿದ ನಂತರ ಅಧಿಕಾರಿಗಳು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬಹುದು. ಅದೇ ರೀತಿ, ವಿಗ್ರಹದ ಸಮೀಪ ಹುಂಡಿ ಇಡಲಾಗಿದ್ದರೆ, ಮುಜರಾಯಿ ಇಲಾಖೆ ಪರಿಶೀಲನೆ ನಡೆಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ಸೇರಿಸಿದೆ.


ಆದರೆ, ವ್ಯಕ್ತಿಯೊಬ್ಬನು ತನ್ನ ಆವರಣದಲ್ಲಿ ವಿಗ್ರಹವನ್ನು ಇಡುವುದನ್ನು ಸಾರ್ವಜನಿಕರು ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ವಿಗ್ರಹಗಳನ್ನು ಕಾರ್ತಿಕ್ ಅವರಿಗೆ ಹಿಂದಿರುಗಿಸಲಾಗಿದೆ ಎಂದು ಗಮನಿಸಿ, ನ್ಯಾಯಾಲಯ ಅರ್ಜಿಯನ್ನು ಮುಕ್ತಾಯಗೊಳಿಸಿತು.


ಪ್ರಕರಣ ಶೀರ್ಷಿಕೆ: ಎ. ಕಾರ್ತಿಕ್ ವಿ. ಶ್ರೀಮತಿ ರಶ್ಮಿ ಸಿದ್ಧಾರ್ಥ ಜಗಡೆ ಮತ್ತು ಇತರರು

ಪ್ರಕರಣ ಸಂಖ್ಯೆ: CONT P 3856/2025

Ads on article

Advertise in articles 1

advertising articles 2

Advertise under the article