ಕ್ರಿಮಿನಲ್ ಪ್ರಕರಣದಲ್ಲಿ ಪ್ರೊಬೇಷನ್ ಮೇಲೆ ಬಿಡುಗಡೆ: ದೋಷಾರೋಪಣೆಯ ಕಳಂಕ ಅಳಿಯದು- ಶಿಕ್ಷೆ ಕಡಿತ ಅಸಾಧ್ಯ ಎಂದ ಸುಪ್ರೀಂ ಕೋರ್ಟ್
ಕ್ರಿಮಿನಲ್ ಪ್ರಕರಣದಲ್ಲಿ ಪ್ರೊಬೇಷನ್ ಮೇಲೆ ಬಿಡುಗಡೆ: ದೋಷಾರೋಪಣೆಯ ಕಳಂಕ ಅಳಿಯದು- ಶಿಕ್ಷೆ ಕಡಿತ ಅಸಾಧ್ಯ ಎಂದ ಸುಪ್ರೀಂ ಕೋರ್ಟ್
ಕ್ರಿಮಿನಲ್ ಪ್ರಕರಣದಲ್ಲಿ ಪ್ರೊಬೇಷನ್ ಮೇಲೆ ಬಿಡುಗಡೆ ನೀಡುವುದರಿಂದ ದೋಷಾರೋಪಣೆಯ ಕಳಂಕ ಅಳಿಯುವುದಿಲ್ಲ ಎಂಬುದನ್ನು ಗಮನಿಸಿ, ಕಾರ್ಮಿಕನಿಗೆ ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಪ್ರೊಬೇಷನ್ ಸೌಲಭ್ಯ ದೊರೆತಿದೆ ಎಂಬ ಒಂದೇ ಕಾರಣದಿಂದ ಶಿಕ್ಷೆಯನ್ನು ಕಡಿತಗೊಳಿಸಿದ್ದ ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
“ಇಲ್ಲಿ ಕಾರ್ಮಿಕನ ವಿರುದ್ಧದ ದೋಷಾರೋಪಣೆ ಸೇವೆಯಿಂದ ವಜಾಗೊಳಿಸಲು ಅಡ್ಡಿಯಾಗುವುದಿಲ್ಲ ಹಾಗೂ ಈ ದೋಷಾರೋಪಣೆ ಮಾತ್ರವೇ ಸೇವೆಯಿಂದ ವಜಾಗೊಳಿಸಲು ಕಾರಣವಲ್ಲ ಎಂದು ಹೈಕೋರ್ಟ್ ಗಮನಿಸಿರುವುದು ದೋಷಪೂರ್ಣವಾಗಿದೆ” ಎಂದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ, ಕಾರ್ಮಿಕನು ತನ್ನನ್ನು ತನ್ನ ಸಹೋದರನಂತೆ ಬಿಂಬಿಸಿ (impersonation) ಹಾಗೂ ನಕಲಿ ಶಿಕ್ಷಣ ಪ್ರಮಾಣಪತ್ರವನ್ನು ಬಳಸಿಕೊಂಡು ಉದ್ಯೋಗಕ್ಕೆ ನೇಮಕಗೊಂಡಿದ್ದನು. ಆಂತರಿಕ ಶಿಸ್ತು ವಿಚಾರಣೆಯ ನಂತರ ಅವನನ್ನು ಸೇವೆಯಿಂದ ವಜಾಗೊಳಿಸಲಾಯಿತು.
ಕಾರ್ಮಿಕ ನ್ಯಾಯಾಲಯವು ವಜಾ ಶಿಕ್ಷೆಯನ್ನು ಬದಲಿಸಿ, ವೇತನ ಕಡಿತ ಮತ್ತು ಮೂರು ವರ್ಷಗಳ ಕಾಲ ಹೆಚ್ಚುವರಿ ಇನ್‌ಕ್ರಿಮೆಂಟ್ ಕಡಿತಗೊಳಿಸುವ ಶಿಕ್ಷೆಯನ್ನು ವಿಧಿಸಿತು. ನಂತರ ಹೈಕೋರ್ಟ್, ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಕಾರ್ಮಿಕನಿಗೆ ಪ್ರೊಬೇಷನ್ ಸೌಲಭ್ಯ ದೊರೆತಿದೆ ಎಂಬ ಕಾರಣವನ್ನು ಪ್ರಮುಖವಾಗಿ ಪರಿಗಣಿಸಿ, ಶಿಕ್ಷೆಯನ್ನು ಕಡ್ಡಾಯ ನಿವೃತ್ತಿಗೆ (compulsory retirement) ಪರಿವರ್ತಿಸಿತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಾನ್ಯ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, "Union of India Vs. Bakshi Ram (1990) 2 SCC 426" ಪ್ರಕರಣದಲ್ಲಿ ನೀಡಿದ ತೀರ್ಪನ್ನು ಆಧಾರವಾಗಿ ಉಲ್ಲೇಖಿಸಿದರು.
ಅಪರಾಧಿಯನ್ನು ಪ್ರೊಬೇಷನ್ ಮೇಲೆ ಬಿಡುಗಡೆ ಮಾಡಿದರೂ ದೋಷಾರೋಪಣೆಯ ಕಳಂಕ ಅಳಿಯುವುದಿಲ್ಲ; ದೋಷಾರೋಪಣೆ ಜಾರಿಯಲ್ಲಿರುವವರೆಗೆ, ಪ್ರತಿವಾದಿ-ಕಾರ್ಮಿಕನನ್ನು ಪ್ರೊಬೇಷನ್ ಮೇಲೆ ಬಿಡುಗಡೆ ಮಾಡಿರುವುದನ್ನು ಸೇವೆಯಿಂದ ವಜಾ ಶಿಕ್ಷೆಯನ್ನು ಕಡ್ಡಾಯ ನಿವೃತ್ತಿಗೆ ಬದಲಿಸುವ ಆಧಾರವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅವರು ವಾದಿಸಿದರು.
ಅಪೀಲುದಾರರ ವಾದದಲ್ಲಿ ತಾತ್ಪರ್ಯವಿದೆ ಎಂಬುದನ್ನು ಅರಿತ ನ್ಯಾಯಪೀಠ, ಬಕ್ಷಿ ರಾಮ್ ಪ್ರಕರಣದಲ್ಲಿ ಪ್ರತಿಪಾದಿಸಿದ ತತ್ವವನ್ನು ಪುನರುಚ್ಚರಿಸಿ, “ಇಲ್ಲಿ ಕಾರ್ಮಿಕನಿಗೆ ಆದ ದೋಷಾರೋಪಣೆ ಅಯೋಗ್ಯತೆಯಲ್ಲ ಮತ್ತು ಈ ದೋಷಾರೋಪಣೆ ಮಾತ್ರವೇ ಸೇವೆಯಿಂದ ವಜಾಗೊಳಿಸಲು ಕಾರಣವಲ್ಲ ಎಂದು ಹೈಕೋರ್ಟ್ ಹೇಳಿರುವುದು ದೋಷಪೂರ್ಣವಾಗಿದೆ” ಎಂದು ಗಮನಿಸಿದೆ.
ಇನ್ನು, “ಹೈಕೋರ್ಟ್ ನ ಅಭಿಪ್ರಾಯೋಕ್ತಿ ಬಕ್ಷಿ ರಾಮ್ (ಮೇಲ್ಕಂಡ) ಪ್ರಕರಣದಲ್ಲಿ ಸ್ಥಾಪಿತವಾದ ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ, ಪ್ರಶ್ನಿತ ಆದೇಶದ ಪ್ಯಾರಾ 14ರಲ್ಲಿ ಪ್ರತಿವಾದಿ-ಕಾರ್ಮಿಕನ ಪರವಾಗಿ ಮಾಡಿದ ಹೈಕೋರ್ಟ್‌ನ ಅಭಿಪ್ರಾಯೋಕ್ತಿಯನ್ನು ನಾವು ರದ್ದುಪಡಿಸಿ, ಬಕ್ಷಿ ರಾಮ್ (ಮೇಲ್ಕಂಡ) ಪ್ರಕರಣದಲ್ಲಿ ಸ್ಥಾಪಿತವಾದ ಕಾನೂನನ್ನು ಪುನರುಚ್ಚರಿಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ.
ಪ್ರತಿವಾದಿ-ಕಾರ್ಮಿಕನು ಮೃತಪಟ್ಟಿರುವುದನ್ನು ಪರಿಗಣಿಸಿ, ಪ್ರಶ್ನಿತ ತೀರ್ಪಿನಲ್ಲಿ ಹೈಕೋರ್ಟ್ ಮಾಡಿದ ಶಿಕ್ಷೆಯ ಪರಿವರ್ತನೆಯಲ್ಲಿ ಪೀಠ ಹಸ್ತಕ್ಷೇಪ ಮಾಡಲಿಲ್ಲ. ಹೀಗಾಗಿ ಅಪೀಲನ್ನು ಅಂತಿಮವಾಗಿ ವಿಲೇವಾರಿ ಮಾಡಲಾಯಿತು.
ಪ್ರಕರಣದ ಶೀರ್ಷಿಕೆ : THE SUPERINTENDING ENGINEER VERSUS THE LABOUR COURT, MADURAI & OTHERS
ಸುಪ್ರೀಂ ಕೋರ್ಟ್