ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆ: ಕುಲಕಸುಬಿನಿಂದ ಸಂಬೋಧನೆ ಜಾತಿ ನಿಂದನೆಯಲ್ಲ- ಹೈಕೋರ್ಟ್ ಆದೇಶ
ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆ: ಕುಲಕಸುಬಿನಿಂದ ಸಂಬೋಧನೆ ಜಾತಿ ನಿಂದನೆಯಲ್ಲ- ಹೈಕೋರ್ಟ್ ಆದೇಶ
ಯಾವುದೇ ವ್ಯಕ್ತಿಯನ್ನು ಆತನ/ಆಕೆಯ ಕುಲಕಸುಬಿನಿಂದ/ವೃತ್ತಿಯಿಂದ ಕರೆದ ಮಾತ್ರಕ್ಕೆ, ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಅನಿಲ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.
ಮನೆಗೆಲಸದ ಮಹಿಳೆಯನ್ನು ಜಾತಿಯಿಂದ ಕರೆಯುವ ಮೂಲಕ ಅವಮಾನಿಸಲಾಗಿದೆ ಎಂದು ಆರೋಪಿಸಿ, ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಎಸ್‌ಸಿ/ಎಸ್‌ಟಿ ವಿಶೇಷ ನ್ಯಾಯಾಲಯವು ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕನ ವಿರುದ್ಧ ಸಮನ್ಸ್ ಜಾರಿಗೊಳಿಸಿತ್ತು. ಈ ಸಮನ್ಸ್ ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಜಾತಿ ಸೂಚಕ ಪದ ಬಳಕೆ ತಪ್ಪಲ್ಲ. ಆದರೆ, ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದಲೇ ಅಂತಹ ಪದಗಳನ್ನು ಬಳಸಲಾಗಿತ್ತು ಎಂಬುದು ಸಾಬೀತಾಗಬೇಕು. ಆಗ ಮಾತ್ರ ಅದು ದೌರ್ಜನ್ಯ ಪದದ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಹೇಳಿದೆ.
'ನಾನು ಕೆಲಸ ಮಾಡುತ್ತಿದ್ದ ಮನೆಯ ಮಾಲೀಕನ ಬಟ್ಟೆಗಳನ್ನು ಒಗೆಯುತ್ತಿದ್ದೆ. ಕೂಲಿ ನೀಡುವಂತೆ ಕೇಳಿದ ವೇಳೆ, ಅರ್ಜಿದಾರ(ಮನೆ ಮಾಲೀಕ) ನನ್ನನ್ನು ನನ್ನ ಜಾತಿಯಿಂದ ಕರೆದು, ಅವಮಾನಿಸಿದ್ದಾರೆ' ಎಂದು ಮಹಿಳೆ ದೂರು ನೀಡಿದ್ದರು.
'ದೂರುದಾರ ಮಹಿಳೆಯನ್ನು 'ಧೋಬನ್' ಎಂದು ಕರೆಯಲಾಗಿದೆ. ಬಟ್ಟೆ ಒಗೆಯುವ ಕೆಲಸಕ್ಕಾಗಿಯೇ ದೂರುದಾರರು ಮತ್ತು ಅರ್ಜಿದಾರರ ನಡುವೆ ಕರಾರು ಏರ್ಪಟ್ಟಿತ್ತು' ಎಂಬುದನ್ನು ಪೀಠ ಗಮನಿಸಿದೆ.
ಅರ್ಜಿದಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ಪೀಠವು, ಎಸ್‌ಸಿ/ಎಸ್‌ಟಿ ಕಾಯ್ದೆಯ ಅವಕಾಶಗಳಡಿ ಸಮನ್ಸ್ ನೀಡಿ ಹೊರಡಿಸಿದ್ದ ಅದೇಶವನ್ನು ರದ್ದುಗೊಳಿಸಿದೆ. ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಅರ್ಜಿದಾರ ವಿರುದ್ಧದ ವಿಚಾರಣೆ ಮುಂದುವರಿಸಬೇಕು ಎಂದೂ ಆದೇಶಿಸಿದೆ.