-->
ಅಸ್ತಿತ್ವದಲ್ಲಿಲ್ಲದ ತೀರ್ಪುಗಳ ಅವಲಂಬನೆ; ನ್ಯಾಯಾಂಗದ ವಿಶ್ವಾಸಾರ್ಹತೆ ಮೇಲೆ ಪರಿಣಾಮ- ಜಡ್ಜ್‌ಗಳ ಲೋಪವಲ್ಲ, ದುರ್ನಡತೆ ಎಂದ ಸುಪ್ರೀಂ ಕೋರ್ಟ್‌

ಅಸ್ತಿತ್ವದಲ್ಲಿಲ್ಲದ ತೀರ್ಪುಗಳ ಅವಲಂಬನೆ; ನ್ಯಾಯಾಂಗದ ವಿಶ್ವಾಸಾರ್ಹತೆ ಮೇಲೆ ಪರಿಣಾಮ- ಜಡ್ಜ್‌ಗಳ ಲೋಪವಲ್ಲ, ದುರ್ನಡತೆ ಎಂದ ಸುಪ್ರೀಂ ಕೋರ್ಟ್‌

ಅಸ್ತಿತ್ವದಲ್ಲಿಲ್ಲದ ತೀರ್ಪುಗಳ ಅವಲಂಬನೆ; ನ್ಯಾಯಾಂಗದ ವಿಶ್ವಾಸಾರ್ಹತೆ ಮೇಲೆ ಪರಿಣಾಮ- ಜಡ್ಜ್‌ಗಳ ಲೋಪವಲ್ಲ, ದುರ್ನಡತೆ ಎಂದ ಸುಪ್ರೀಂ ಕೋರ್ಟ್‌





ನಕಲಿ ತೀರ್ಪುಗಳನ್ನು ಆಧರಿಸಿದ ನ್ಯಾಯತೀರ್ಮಾನ

ಜಡ್ಜ್‌ಗಳ ಲೋಪವಲ್ಲ, ದುರ್ನಡತೆ: ಸುಪ್ರೀಂ ಕೋರ್ಟ್

ಕೃತಕ ಬುದ್ದಿಮತ್ತೆ ಮೇಲೆ ಅವಲಂಬನೆಯಿಂದ ನ್ಯಾಯಾಂಗದ ವಿಶ್ವಾಸಾರ್ಹತೆ ಮೇಲೆ ಪರಿಣಾಮ


ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟೆಲಿಜೆನ್ಸಿ) ಸಹಾಯದಿಂದ ಸೃಷ್ಟಿಸಿದ ನಕಲಿ ತೀರ್ಪುಗಳನ್ನು ಅಧರಿಸಿ ವಿಚಾರಣಾ ನ್ಯಾಯಾಲಯಗಳು ನೀಡುವ ತೀರ್ಪು ಲೋಪವಷ್ಟೇ ಅಲ್ಲ, ಅದನ್ನು ದುರ್ನಡತೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮಹ್ರಾ ಮತ್ತು ಭಾರತೀಯ ವಕೀಲರ ಸಂಘಕ್ಕೆ (ಬಿಸಿಐ) ನೋಟಿಸ್ ಜಾರಿ ಮಾಡಿದೆ. ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯಾಗಿ ನ್ಯಾಯಪೀಠಕ್ಕೆ ನೆರವಾಗಲು ಹಿರಿಯ ವಕೀಲ ಶ್ಯಾಮ್ ದಿವಾನ್ ಅವರನ್ನು ನೇಮಿಸಿದೆ.


'ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟೆಲಿಜೆನ್ಸಿ) ಮೂಲಕ ಸೃಷ್ಟಿಸಿದ ಅಸ್ತಿತ್ವದಲ್ಲೇ ಇಲ್ಲದ ಅಥವಾ ನಕಲಿ ತೀರ್ಪುಗಳನ್ನು ವಿಚಾರಣಾ ನ್ಯಾಯಾಲಯಗಳು ಪರಿಗಣಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇದನ್ನು ನಾವು ಗಮನಿಸಿದ್ದೇವೆ. ಇದು ನ್ಯಾಯಾಂಗ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಪರಿಣಾಮಗಳು ಮತ್ತು ಹೊಣೆಗಾರಿಕೆಯನ್ನು ಪರಿಶೀಲಿಸಲು ನಾವು ಬಯಸುತ್ತೇವೆ' ಎಂದು ನ್ಯಾಯಪೀಠ ತಿಳಿಸಿದೆ.


ಅಸ್ತಿತ್ವದಲ್ಲಿ ಇಲ್ಲದ ಅಥವಾ ನಕಲಿ ತೀರ್ಪುಗಳ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರವು ಕೇವಲ ನಿರ್ಧಾರ ತೆಗೆದುಕೊಳ್ಳುವಲ್ಲಿನ ದೋಷವಷ್ಟೇ ಅಲ್ಲ, ಬದಲಿಗೆ, ಇದು ದುರ್ನಡತೆಯಾಗುತ್ತದೆ. ಜತೆಗೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ನಾವು ಈ ವಿಷಯವನ್ನು ಹೆಚ್ಚು ವಿವರವಾಗಿ ಪರಿಶೀಲಿಸುವುದು ಅನಿವಾರ್ಯವಾಗಿದೆ' ಎಂದು ಅದು ಅಭಿಪ್ರಾಯಪಟ್ಟಿದೆ.


ಆಂಧ್ರ ಪ್ರದೇಶ ಹೈಕೋರ್ಟ್ ಜನವರಿಯಲ್ಲಿ ನೀಡಿದ್ದ ತಡೆಯಾಜ್ಞೆ ಕುರಿತಾದ ಅದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ವಿಷಯವು ಸುಪ್ರೀಂ ಕೋರ್ಟ್ ಮುಂದೆ ಬಂದಿದೆ.


ಏನಿದು ಪ್ರಕರಣ?: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ, ಸ್ಥಳದ ಭೌತಿಕ ಸ್ಥಿತಿಗತಿಗಳನ್ನು ಪರಿಶೀಲಿಸಲು ವಿಚಾರಣಾ ನ್ಯಾಯಾಲಯವು ಅಡ್ವಕೇಟ್ ಕಮಿಷನರ್ ಅವರನ್ನು ನೇಮಿಸಿತ್ತು.


ಅಡ್ವಕೇಟ್ ಕಮಿಷನರ್ ನೀಡಿದ ವರದಿಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಕಳೆದ ವರ್ಷ ಆಗಸ್ಟ್‌ನಲ್ಲಿ ವಿಚಾರಣಾ ನ್ಯಾಯಾಲಯವು ಈ ಆಕ್ಷೇಪಣೆಗಳನ್ನು ವಜಾಗೊಳಿಸಿತ್ತು. ಈ ವೇಳೆ, ನ್ಯಾಯಾಲಯವು ಕೆಲವು ಹಿಂದಿನ ತೀರ್ಪುಗಳನ್ನು ಉದಾಹರಣೆಯಾಗಿ ನೀಡಿತ್ತು. ಅರ್ಜಿದಾರರು ಈ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸಿ, 'ನ್ಯಾಯಾಲಯ ಉಲ್ಲೇಖಿಸಿರುವ ಆ ತೀರ್ಪುಗಳು ಅಸ್ತಿತ್ವದಲ್ಲೇ ಇಲ್ಲ, ಅವು ನಕಲಿ' ಎಂದು ವಾದಿಸಿದ್ದರು.


ನಂತರ, ಹೈಕೋರ್ಟ್ ಅಕ್ಷೇಪಗಳನ್ನು ಪರಿಶೀಲಿಸಿದಾಗ, ತೀರ್ಪುಗಳು ಎಐ ಸಹಾಯದಿಂದ ಸೃಷ್ಟಿಯಾದವು ಎಂಬುದು ತಿಳಿದುಬಂದಿತ್ತು. ಹೈಕೋರ್ಟ್ ಈ ಬಗ್ಗೆ ಎಚ್ಚರಿಕೆ ನೀಡಿತ್ತಾದರೂ, ಅಂತಿಮವಾಗಿ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನೇ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆಗೆ ಒಪ್ಪಿಗೆ ಸೂಚಿಸಿ, ನೋಟಿಸ್ ಜಾರಿ ಮಾಡಿದೆ.


'ಮೇಲ್ಮನವಿ ಅರ್ಜಿಯ ಇತ್ಯರ್ಥ ಬಾಕಿ ಇರುವವರೆಗೆ, ಅಡ್ವಕೇಟ್ ಕಮಿಷನರ್ ವರದಿಯ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯವು ಮುಂದಿನ ಕ್ರಮ ಕೈಗೊಳ್ಳಬಾರದು' ಎಂದು ನ್ಯಾಯಾಲಯ ಸೂಚಿಸಿ. ಮಾರ್ಚ್ 10ಕ್ಕೆ ವಿಚಾರಣೆ ಮುಂದೂಡಿದೆ.



Ads on article

Advertise in articles 1

advertising articles 2

Advertise under the article