-->
ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮಹತ್ವದ ತಿಳಿಸಿದ ತೀರ್ಪು: ಆದೇಶ ಪಾಲಿಸದಿದ್ದರೆ ಕ್ಷಮಾರ್ಹವಲ್ಲ ಎಂದು ಹೈಕೋರ್ಟ್ ಹೇಳಿದ್ದೇಕೆ..?

ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮಹತ್ವದ ತಿಳಿಸಿದ ತೀರ್ಪು: ಆದೇಶ ಪಾಲಿಸದಿದ್ದರೆ ಕ್ಷಮಾರ್ಹವಲ್ಲ ಎಂದು ಹೈಕೋರ್ಟ್ ಹೇಳಿದ್ದೇಕೆ..?

ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮಹತ್ವದ ತಿಳಿಸಿದ ತೀರ್ಪು: ಆದೇಶ ಪಾಲಿಸದಿದ್ದರೆ ಕ್ಷಮಾರ್ಹವಲ್ಲ ಎಂದು ಹೈಕೋರ್ಟ್ ಹೇಳಿದ್ದೇಕೆ..?





ಮ್ಯಾಜಿಸ್ಟ್ರೇಟ್ ತನ್ನ ನ್ಯಾಯಿಕ ಕಾರ್ಯವನ್ನು ನಿರ್ವಹಿಸುವಾಗ, ಅವರು ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗಿಂತಲೂ ಹಾಗೂ ರಾಜ್ಯದ ರಾಜಕೀಯ ಮುಖ್ಯಸ್ಥರಿಗಿಂತಲೂ ಮೇಲಿರುವ ಸ್ಥಾನದಲ್ಲಿರುತ್ತಾರೆ. ಮ್ಯಾಜಿಸ್ಟ್ರೇಟ್‌ ಕೋರ್ಟ್ ಆದೇಶವನ್ನು ಪಾಲಿಸದೇ ಇರುವುದು ‘ಕ್ಷಮಾರ್ಹವಲ್ಲ' ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಅಲಹಾಬಾದ್ ಹೈಕೋರ್ಟ್ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.


ನ್ಯಾಯಿಕ ಅಧಿಕಾರಿ ನೀಡಿದ ಆದೇಶಗಳನ್ನು ಅವಮಾನಿಸುವುದು ಕೇವಲ ನ್ಯಾಯಾಂಗ ನಿಂದನೆ (Contempt of Court) ಮಾತ್ರವಲ್ಲ, ಅದು ಕಾನೂನಿನ ಪ್ರಾಮುಖ್ಯತೆಗೆ ನೇರ ಸವಾಲು ಎಂಬುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿದೆ.


ಲಲಿತ್‌ಪುರ್‌ನ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (CJM) ಅವರ ಆದೇಶಗಳನ್ನು ನಿರ್ಲಕ್ಷಿಸಿದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ನಿಲುವು ತಾಳಿತು. ಹೀಗಾಗಿ, ಠಾಣಾಧಿಕಾರಿ (ಸ್ಟೇಷನ್ ಹೌಸ್ ಆಫೀಸರ್ -SHO) ಹಾಗೂ ತನಿಖಾ ಅಧಿಕಾರಿ (IO) ಅವರನ್ನು ಕಲಾಪ ಮುಗಿಯುವವರೆಗೆ ನ್ಯಾಯಾಂಗ ಕಸ್ಟಡಿಯಲ್ಲಿ ಇರಿಸಲು ಆದೇಶಿಸಿತು.


ಪ್ರಕರಣ ಸಂಕ್ಷಿಪ್ತ ವಿವರ:

ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾನು ಅಲಿಯಾಸ್ ರಶೀದ್ ಅವರ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಅವರನ್ನು 14 ಸೆಪ್ಟೆಂಬರ್ 2025ರಂದು ಅಧಿಕೃತ ಬಂಧನದ ದಾಖಲೆ ಇಲ್ಲದೆ ಕಸ್ಟಡಿಗೆ ತೆಗೆದುಕೊಂಡಿದ್ದಾಗಿ ಆರೋಪವಿತ್ತು.


16 ಸೆಪ್ಟೆಂಬರ್ ರಂದು, ಅವರ ಸಹೋದರಿ ಲಲಿತ್‌ಪುರ್‌ನ CJM ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಸಹೋದರನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರೂ ಬಂಧನ ದಾಖಲೆ ಮಾಡಿಲ್ಲವೆಂದು ದೂರಿದರು. ಅದೇ ದಿನ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಸಲ್ಲಿಸಲಾಯಿತು. ಆದರೆ 17 ಸೆಪ್ಟೆಂಬರ್ ಬೆಳಿಗ್ಗೆ ಬಂಧನ ನಡೆದಿದೆ ಎಂದು ಡಿಜಿಸಿ (ಕ್ರಿಮಿನಲ್) ತಿಳಿಸಿದ ಹಿನ್ನೆಲೆಯಲ್ಲಿ, 18 ಸೆಪ್ಟೆಂಬರ್ ರಂದು ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾಯಿತು.


ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಿಜೆಎಂ ನ್ಯಾಯಾಲಯ, 22 ಸೆಪ್ಟೆಂಬರ್, 30 ಸೆಪ್ಟೆಂಬರ್ ಹಾಗೂ 3 ನವೆಂಬರ್ 2025ರಂದು ಕ್ರಮವಾಗಿ ಆದೇಶ ನೀಡಿ, ಅಕ್ರಮ ಕಸ್ಟಡಿಗೆ ಸಂಬಂಧಿಸಿದ ದಿನಾಂಕಗಳ ಪೊಲೀಸ್ ಠಾಣೆಯ CCTV ದೃಶ್ಯಾವಳಿಗಳನ್ನು ಸಲ್ಲಿಸಲು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿತು. ಆದರೆ, ಈ ನಿರ್ದೇಶನವನ್ನು ಪೊಲೀಸರು ಪಾಲಿಸದೆ ನಿರ್ಲಕ್ಷ್ಯ ತೋರಿದ್ದರು.


CJM ಅವರು ತಮ್ಮ ಆದೇಶದಲ್ಲಿ Paramvir Singh Saini v. Baljit Singh ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದರು, ಅಲ್ಲಿ ಪೊಲೀಸ್ ಠಾಣೆಗಳಲ್ಲಿ CCTV ಕ್ಯಾಮೆರಾ ಅಳವಡಿಕೆ ಮತ್ತು ವೀಡಿಯೋ ಸಂರಕ್ಷಣೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.


ಇದೇ ವೇಳೆ, ಸೂರ್ಯಾಸ್ತದ ನಂತರ ಹಾಗೂ ಸೂರ್ಯೋದಯದ ಮೊದಲು ಮಹಿಳೆಯನ್ನು ಬಂಧಿಸಲು ಕಾನೂನು ಅವಕಾಶ ನೀಡುವುದಿಲ್ಲ. ಆದರೂ ಸಹ ಆರೋಪಿ ರಶೀದಾ ಅವರನ್ನು ಬೆಳಗ್ಗೆ 4:00 ಗಂಟೆಗೆ ಬಂಧಿಸಿರುವುದರ ಬಗ್ಗೆ ಕೋರ್ಟ್ ಸ್ಪಷ್ಟೀಕರಣ ಕೇಳಿತು.


ಇದಲ್ಲದೆ, "ಅಖಿಲ ಭಾರತ ನ್ಯಾಯಾಧೀಶರ ಒಕ್ಕೂಟ ವಿರುದ್ಧ ಭಾರತ ಒಕ್ಕೂಟ" ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್ ಪೀಠ, ನ್ಯಾಯಾಧೀಶರನ್ನು ಆಡಳಿತ ಅಥವಾ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಹೋಲಿಸಲಾಗುವುದಿಲ್ಲ; ಅವರು ಸ್ವಾಯತ್ತ ರಾಜ್ಯ ಕಾರ್ಯವನ್ನು ನಿರ್ವಹಿಸುತ್ತಾರೆ" ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.


ಕಿರಿಯ ವಿಭಾಗದ ನ್ಯಾಯಿಕ ಅಧಿಕಾರಿ ಆಗಿದ್ದರೂ ಅವರು ತನ್ನ ನ್ಯಾಯಿಕ ಕಾರ್ಯವನ್ನು ನಿರ್ವಹಿಸುವಾಗ, ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹಾಗೂ ರಾಜ್ಯದ ರಾಜಕೀಯ ಮುಖ್ಯಸ್ಥರಿಗಿಂತಲೂ ಉನ್ನತ ಸ್ಥಾನದಲ್ಲಿ ಇರುತ್ತಾರೆಎಂದು ತೀರ್ಪು ವಿವರಿಸಿತು.


ಅದರಂತೆ, ನ್ಯಾಯಾಂಗ ನಿಂದನೆ ಕಾಯ್ದೆ, 1971ರ ಸೆಕ್ಷನ್ 10ರಡಿ ಪ್ರದತ್ತ ಅಧಿಕಾರ ಬಳಸಿ, SHO ಮತ್ತು IO ಅವರನ್ನು ನ್ಯಾಯಾಂಗ ನಿಂದನೆಗೆ ದೋಷಿಗಳೆಂದು ಘೋಷಿಸಿತು. ಆದಾಗ್ಯೂ, ಶಿಕ್ಷೆಯ ಪ್ರಮಾಣದಲ್ಲಿ ಸೌಮ್ಯ ನಿಲುವು ತಾಳಿದ ನ್ಯಾಯಾಲಯ, ಅವರನ್ನು ಮಧ್ಯಾಹ್ನ 4:00 ಗಂಟೆಯವರೆಗೆ ನ್ಯಾಯಾಲಯದಲ್ಲೇ ಕಸ್ಟಡಿಯಲ್ಲಿ ಇರಲು ಶಿಕ್ಷೆ ವಿಧಿಸಿತು.


ಅಲ್ಲದೆ, ಆರೋಪಿಯನ್ನು ಕುಟುಂಬಕ್ಕೆ ತಿಳಿಸದೆ ಮೂರು ದಿನಗಳ ಕಾಲ ಅಕ್ರಮವಾಗಿ ಕಸ್ಟಡಿಯಲ್ಲಿ ಇಟ್ಟಿರುವುದು, D.K. Basu v. State of West Bengal ತೀರ್ಪಿನ ಮಾರ್ಗಸೂಚಿಗಳಿಗೆ ನೇರ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ, ರಾಜ್ಯ ಸರ್ಕಾರವು ಅರ್ಜಿದಾರರಿಗೆ ರೂ.1 ಲಕ್ಷ ಪರಿಹಾರ ನೀಡಲು ಆದೇಶಿಸಲಾಯಿತು. ನಂತರ ಈ ಮೊತ್ತವನ್ನು ಸಂಬಂಧಿಸಿದ ಪೊಲೀಸ್ ಸಿಬ್ಬಂದಿಗಳ ವೇತನದಿಂದ ವಸೂಲು ಮಾಡಲು ರಾಜ್ಯಕ್ಕೆ ಸ್ವಾತಂತ್ರ್ಯ ನೀಡಲಾಯಿತು.


ಮುಖ್ಯವಾಗಿ, ಪ್ರತಿಯೊಂದು ಜಿಲ್ಲೆಯ CJM ಅಥವಾ ಸಂಬಂಧಿಸಿದ ಮ್ಯಾಜಿಸ್ಟ್ರೇಟ್‌ಗಳು ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ, ಜಿಲ್ಲಾ ನ್ಯಾಯಾಧೀಶರಿಗೆ ಪೂರ್ವ ಸೂಚನೆ ನೀಡಿ, ನ್ಯಾಯಾಲಯ ಸಮಯದ ನಂತರ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ CCTV ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಆಕಸ್ಮಿಕವಾಗಿ ಪರಿಶೀಲಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತು.


ಈ ಪರಿಶೀಲನೆ Paramvir Singh Saini ಪ್ರಕರಣದ ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ ಅನುಗುಣವಾಗಿದ್ದು, ಅದು ಅವರ ಅಧಿಕೃತ ಕರ್ತವ್ಯದ ಭಾಗವೆಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಅದರ ಜೊತೆಗೆ, ಪ್ರತಿ ಜಿಲ್ಲೆಯ ಮಾನವ ಹಕ್ಕು ನ್ಯಾಯಾಲಯಗಳು ಮಾನವ ಹಕ್ಕು ಉಲ್ಲಂಘನೆಗಳ ಕುರಿತು, ವಿಶೇಷವಾಗಿ ಅಕ್ರಮ ಬಂಧನ ಅಥವಾ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿನ ಹಿಂಸೆ ಕುರಿತು, ದೂರುಗಳನ್ನು ಸ್ವೀಕರಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿತು.


ಅಂತಿಮವಾಗಿ, ಅರ್ಜಿದಾರನು ಮೊದಲ ಮಾಹಿತಿದಾರರ ಹಣಕಾಸು ಸಂಸ್ಥೆಗೆ 15 ದಿನಗಳೊಳಗೆ ರೂ.15 ಲಕ್ಷ ವರ್ಗಾಯಿಸುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಹೈಕೋರ್ಟ್ ಆತನಿಗೆ ಜಾಮೀನು ನೀಡಿತು.


Ads on article

Advertise in articles 1

advertising articles 2

Advertise under the article