ಜನನ ಪ್ರಮಾಣಪತ್ರದಲ್ಲಿ ಮಗುವಿನ ತಂದೆಯ ಹೆಸರು ಕಡ್ಡಾಯವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಜನನ ಪ್ರಮಾಣಪತ್ರದಲ್ಲಿ ಮಗುವಿನ ತಂದೆಯ ಹೆಸರು ಕಡ್ಡಾಯವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಲಿವ್ ಇನ್ ರಿಲೇಶನ್‌ನಲ್ಲಿ ಜನಿಸಿದ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರು ಅಳಿಸಿದರೆ ಕಾನೂನುಬದ್ಧ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಜನನ ಪ್ರಮಾಣಪತ್ರದಲ್ಲಿ ಉಪ ನಾಮ ಬದಲಾವಣೆಗೆ ಸಲ್ಲಿಸಿದ್ದ ಮನವಿಯಲ್ಲಿ ಕಾರಣ ನೀಡದೆ ತಿರಸ್ಕರಿಸಿದ ಜನನ ಮತ್ತು ಮರಣ ನೋಂದಣಾಧಿಕಾರಿಗಳ ಕ್ರಮ ಪ್ರಶ್ನಿಸಿ ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಮಗುವಿಗೆ ತಂದೆಯ ಉಪನಾಮ ಕಡ್ಡಾಯವಲ್ಲ ಎಂದು ಹೇಳಿರುವ ನ್ಯಾಯಪೀಠ, ತಾಯಿ ಏಕೈಕ ಆರೈಕೆದಾರರು ಮತ್ತು ನೈಸರ್ಗಿಕ ಪೋಷಕರಾಗಿದ್ದರೆ ವಾಸ್ತವವಾಗಿ ತಾಯಿ ವಂಶಾವಳಿಯನ್ನು ಮಗುವಿನ ಉಪನಾಮದ ಗುರುತು ಎಂದು ಗುರುತಿಸುವಲ್ಲಿ ಯಾವುದೇ ಸಂವಿಧಾನಿಕ ಅಡಚಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಜನನ ಪ್ರಮಾಣಪತ್ರದಲ್ಲಿನ ಹೆಸರಿನಲ್ಲಿ ಉಪ ನಾಮ ಬದಲಾವಣೆಗೆ ನಮಗೆ ಅಧಿಕಾರವಿಲ್ಲ ಎಂಬ ಉಪ ನೋಂದಣಾಧಿಕಾರಿಯವರ ವಾದವನ್ನು ತಳ್ಳಿ ಹಾಕಿರುವ ನ್ಯಾಯಪೀಠ, 1969ರ ಜನನ ಮತ್ತು ನೋಂದಣಿ ಕಾಯ್ದೆಯ ಪ್ರಕಾರ ಹೆಸರಿನಲ್ಲಿ ಗೊಂದಲ ಸರಿಪಡಿಸಲು ಇಲಾಖೆಯ ರಿಜಿಸ್ಟ್ರಾರ್‌ಗೆ ಅಧಿಕಾರವಿರಲಿದೆ. ಅದರಂತೆ ಹೆಸರಿನಲ್ಲಿ ದೋಷಗಳನ್ನು ಮಾತ್ರವಲ್ಲದೆ ವಿಷಯ ವಸ್ತುವನ್ನೂ ಸರಿಪಡಿಸಬಹುದಾಗಿದೆ ಎಂದು ಪೀಠ ಹೇಳಿದೆ.
ಅಲ್ಲದೆ, ಜನನ ಪ್ರಮಾಣಪತ್ರದಿಂದ ತಂದೆಯ ಹೆಸರನ್ನು ಅಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿಲ್ಲ. ತಂದೆಗೆ ಸಂಬಂಧಿಸಿದ ನಮೂನೆಯಲ್ಲಿ ಜೈವಿಕ ತಂದೆಯ ಹೆಸರಿನ ಜೊತೆಗೆ ತಾಯಿಯ ಕುಟುಂಬದ ಹೆಸರನ್ನೂ ಸೇರಿಸಿ ಮಗುವಿನ ಉಪನಾಮಕ್ಕೆ ಮಾತ್ರ ಬದಲಾವಣೆ ಕೋರಿದ್ದಾರೆ ಎಂದು ಪೀಠ ಹೇಳಿದೆ.
ಮಗುವಿನ ಉಪನಾಮ ಬದಲಾಯಿಸುವುದರಿಂದ ಅನುವಂಶಿಕತೆ, ಉತ್ತರಾಧಿಕಾರ ಮತ್ತು ನಿರ್ವಹೆಯ ಹಕ್ಕುಗಳು ಸೇರಿ ಪ್ರಸ್ತುತ ಜಾರಿಯಲ್ಲಿ ಇರುವ ಯಾವುದೇ ಕಾನೂನಿನ ಅಡಿ ಮಗುವಿನ ಜೈವಿಕ ತಂದೆಯಿಂದ ಇರಬಹುದಾದ ಹಕ್ಕುಗಳನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರ ಮಹಿಳೆ ನೇಪಾಳ ಮೂಲದ ಪುರುಷನೊಂದಿಗೆ ಲಿವ್ ಇನ್ ರಿಲೇಷನ್ ಹೊಂದಿದ್ದರು. ಪರಿಣಾಮ ಅವರಿಗೆ 2017ರಲ್ಲಿ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮಗು ಜನಿಸಿತು.
ಮಗು ಜನನದ ಬಳಿಕ ತಂದೆ, ಮಹಿಳೆ ಮತ್ತು ಮಗುವಿನಿಂದ ದೂರ ನೆಲೆಸಿದ್ದರು. ಅಲ್ಲದೆ, ಮಗುವಿನ ಪಾಲನೆಗೆ ಯಾವುದೇ ನೆರವು ನೀಡಲಿಲ್ಲ. ಈ ನಡುವೆ, ಮಗುವಿನ ಜನನ ಪ್ರಮಾಣದಲ್ಲಿನ ಉಪನಾಮವನ್ನು ತಂದೆಯ ಬದಲಿಗೆ ತಾಯಿಯ ಹೆಸರನ್ನು ಸೇರಿಸಲು ಬಿಬಿಎಂಪಿ ಜನನ ಮರಣ ರಿಜಿಸ್ಟ್ರಾರ್‌ಗೆ ಮನವಿ ಮಾಡಿದ್ದರು. ಈ ಮನವಿಯನ್ನು ರಿಜಿಸ್ಟ್ರಾರ್ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಬಾಧಿತ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು.
Priancy Saru Magar and ors Vs Chief Registrar, Birth and Death
ಕರ್ನಾಟಕ ಹೈಕೋರ್ಟ್, ರಿಟ್ ಅರ್ಜಿ 33465/2025 Datd 17-02-2026