ತೆರಿಗೆ ಬಾಕಿ ಇದೆ ಎಂಬ ಕಾರಣಕ್ಕೆ ಆಸ್ತಿ ನೋಂದಣಿ ನಿರಾಕರಿಸುವಂತಿಲ್ಲ: ಸಬ್ ರಿಜಿಸ್ಟ್ರಾರ್‌ಗಳ ವಿರುದ್ಧ ಆದೇಶ ಹೊರಡಿಸಿದ ಕರ್ನಾಟಕ ಹೈಕೋರ್ಟ್
ತೆರಿಗೆ ಬಾಕಿ ಇದೆ ಎಂಬ ಕಾರಣಕ್ಕೆ ಆಸ್ತಿ ನೋಂದಣಿ ನಿರಾಕರಿಸುವಂತಿಲ್ಲ: ಸಬ್ ರಿಜಿಸ್ಟ್ರಾರ್‌ಗಳ ವಿರುದ್ಧ ಆದೇಶ ಹೊರಡಿಸಿದ ಕರ್ನಾಟಕ ಹೈಕೋರ್ಟ್
ತೆರಿಗೆ ಬಾಕಿ ಇದೆ ಎಂಬ ಕಾರಣಕ್ಕೆ ಆಸ್ತಿ ನೋಂದಣಿ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಸಬ್ ರಿಜಿಸ್ಟ್ರಾರ್‌ಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ನಿಯಮಬಾಹಿರವಾಗಿ ನೋಂದಣಿಗೆ ನಿರಾಕರಿಸುವ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದ್ದು, ಆದಾಯ ತೆರಿಗೆ ಪಾವತಿ ಬಾಕಿ ಇದೆ ಎಂಬ ಕಾರಣಕ್ಕೆ ಆಸ್ತಿಯ ನೋಂದಣಿ ಮಾಡುವುಕ್ಕೆ ನಿರಾಕರಿಸುವಂತಿಲ್ಲ ಎಂದು ಹೇಳಿದೆ.
ಮುದ್ರಾಂಕ ಮತ್ತು ನೋಂದಣಿ ಕಾಯ್ದೆ ಹಾಗೂ ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅದನ್ನು ಬಿಟ್ಟು, ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಹರಾಜು ಮೂಲಕ ಖರೀದಿಸಿದ ಆಸ್ತಿ ನೋಂದಣಿಗೆ ನಿರಾಕರಿಸುವಂತಿಲ್ಲ ಎಂದು ಸಬ್ ರಿಜಿಸ್ಟ್ರಾರ್‌ಗಳಿಗೆ ತಾಕೀತು ಮಾಡಿದೆ.
ಪ್ರಕರಣದ ವಿವರ
ಬೆಂಗಳೂರಿನ ವಿಲ್ಸನ್ ಗಾರ್ಡನ್ನಿನ ಹೊಂಬೇಗೌಡನಗರದಲ್ಲಿರುವ 6,000 ಚದರ ಅಡಿಯ ಅಡಮಾನ ಅಸ್ತಿಯನ್ನು 2022ರ ಮಾರ್ಚ್ ನಲ್ಲಿ ಕೆನರಾ ಬ್ಯಾಂಕ್ ಹರಾಜು ಮಾಡಿತ್ತು. ಈ ವೇಳೆ ಭರತ್ ಗೌಡ ಎಂಬುವರು ಹರಾಜಿನಲ್ಲಿ ಯಶಸ್ವಿ ಬಿಡ್ಡುದಾರರಾಗಿ ಆಸ್ತಿ ಖರೀದಿಸಿದ್ದರು. ಹರಾಜು ಪ್ರಕ್ರಿಯೆಗಳು ಮುಗಿದ ನಂತರ 2022ರ ಸೆಪ್ಟೆಂಬರ್‌ನಲ್ಲಿ ಅವರಿಗೆ ಮಾರಾಟ ಪ್ರಮಾಣಪತ್ರ ನೀಡಲಾಗಿತ್ತು.
ಆಸ್ತಿ ನೋಂದಣಿಗೆ ಅಗತ್ಯವಿರುವ ಮುದ್ರಾಂಕ ಶುಲ್ಕ ಪಾವತಿಸಿದ್ದ ಅರ್ಜಿದಾರ ಭರತ್ ಗೌಡ. ತನ್ನ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಜೆ.ಪಿ. ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.
"ಜಮೀನಿನ ಮೂಲ ಮಾಲೀಕರು ಆದಾಯ ತೆರಿಗೆ ಪಾವತಿಸಿಲ್ಲ. ಹಾಗಾಗಿ, ಸದ್ರಿ ಆಸ್ತಿಯನ್ನು ನೋಂದಣಿ ಮಾಡುವುದಕ್ಕೆ ಅವಕಾಶವಿಲ್ಲ" ಎಂದು ಸಬ್ ರಿಜಿಸ್ಟ್ರಾರ್ ಮೌಖಿಕವಾಗಿ ತಿಳಿಸಿದ್ದರು. 2024ರ ಫೆ. 18ರಂದು ಅರ್ಜಿದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರೂ ಸಬ್ ರಿಜಿಸ್ಟ್ರಾರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತೀರ್ಪು:
ಮುದ್ರಾಂಕ ಮತ್ತು ನೋಂದಣಿ ಕಾಯಿದೆ ಮತ್ತು ರಾಜ್ಯ ಸರಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪ ನೋಂದಣಾಧಿಕಾರಿಗಳು ಕಾರ್ಯ ನಿರ್ವಹಿಸಬಹುದಾಗಿದೆ. ಸಾಲಗಾರರ ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಹರಾಜು ಮೂಲಕ ಅವರ ಆಸ್ತಿ ಖರೀದಿ ಮಾಡಿದವರಿಗೆ ನೋಂದಣಿ ನಿರಾಕರಿಸುವಂತಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ನೋಂದಣಿ ನಿಯಮಗಳ ಅಡಿ ಯಾವುದೇ ಗೊಂದಲಗಳು ಇಲ್ಲದಿದ್ದರೆ ನೋಂದಣಿ ನಿರಾಕರಿಸುವ ಅಧಿಕಾರ ಉಪ ನೋಂದಣಾಧಿಕಾರಿಗಳಿಗೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ನೋಂದಣಿ ನಿಯಮಗಳ ಕುರಿತು ಸೂಕ್ತ ಸುತ್ತೋಲೆ ಹೊರಡಿಸಬೇಕೆಂದು ಸೂಚನೆ ನೀಡಿದೆ.