ಪಕ್ಷಕಾರರ ಸಹಿ ಇಲ್ಲದ ಜಂಟಿ ಜ್ಞಾಪನಪತ್ರ: ವಕೀಲರ ಸಹಿ ಲೋಕ ಅದಾಲತ್ ಐತೀರ್ಪು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಪಕ್ಷಕಾರರ ಸಹಿ ಇಲ್ಲದ ಜಂಟಿ ಜ್ಞಾಪನಪತ್ರ: ವಕೀಲರ ಸಹಿ ಲೋಕ ಅದಾಲತ್ ಐತೀರ್ಪು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಪಕ್ಷಕಾರರ ಸಹಿ ಇಲ್ಲದೇ, ಕೇವಲ ವಕೀಲರು ಮಾತ್ರ ಸಹಿ ಹಾಕಿದ ಜಾಯಿಂಟ್ ಮೆಮೋ ಆಧಾರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿ ಲೋಕ ಅದಾಲತ್ ನೀಡಿದ ಐತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಮೋಟಾರ್ ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಕಾರರ ಸಹಿ ಇಲ್ಲದೇ; ಕೇವಲ ವಕೀಲರು ಮಾತ್ರ ಸಹಿ ಹಾಕಿದ ಜಂಟಿ ಜ್ಞಾಪನಪತ್ರದ ಆಧಾರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿ ಲೋಕ ಅದಾಲತ್ ನೀಡಿದ ಐತೀರ್ಪನ್ನು ಪ್ರಶ್ನಿಸಿ ಹಕ್ಕೊತ್ತಾಯದಾರರು/ಅರ್ಜಿದಾರರು ಕರ್ನಾಟಕ ಹೈಕೋರ್ಟ್ ಮುಂದೆ ಸಲ್ಲಿಸಿದ ರಿಟ್ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಲೋಕ ಅದಾಲತ್ ನೀಡಿದ ಐತಿರ್ಪನ್ನು ರದ್ದುಪಡಿಸಿ ಮೇಲ್ಮನವಿಯ ಮರು ವಿಚಾರಣೆಗೆ ಆದೇಶಿಸಿದೆ.
ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ಪ್ರಕರಣದ ಅರ್ಜಿದಾರರಾದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಹಾಗೂ ಮಗ ಮೃತ ವ್ಯಕ್ತಿಯು ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಆಸ್ಪತ್ರೆ ಕಡೆಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಂದೆ ಸಾವನ್ನಪ್ಪಿದರು.
ಈ ಹಿನ್ನೆಲೆಯಲ್ಲಿ ವಿಮಾ ಕಂಪನಿಯಿಂದ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲಾಯಿತು. ಟ್ರಿಬ್ಯೂನಲ್ ₹9,18,600/- ಪರಿಹಾರವನ್ನು ಬಡ್ಡಿ ಸಹಿತ ನೀಡಿತು.
ಈ ಆದೇಶವನ್ನು ವಿಮಾ ಕಂಪನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಮೇಲ್ಮನವಿ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಪ್ರಕರಣವನ್ನು ಲೋಕ ಅದಾಲತ್‌ಗೆ ಒಪ್ಪಿಸಲಾಯಿತು. ಅಲ್ಲಿ ಒಪ್ಪಂದದ ಆಧಾರದ ಮೇಲೆ ಪರಿಹಾರ ಮೊತ್ತವನ್ನು ₹7,82,000/-ಕ್ಕೆ ಕಡಿತಗೊಳಿಸಿ ಅಂತಿಮವಾಗಿ ನಿರ್ಧರಿಸಲಾಯಿತು.
ಆದರೆ, ಅರ್ಜಿದಾರರು ತಮ್ಮ ವಕೀಲರು ತಮ್ಮ ಅನುಮತಿಯಿಲ್ಲದೆ ಈ ಒಪ್ಪಂದಕ್ಕೆ ಒಪ್ಪಿಕೊಂಡಿದ್ದಾರೆ ಮತ್ತು ತಾವು ಜಾಯಿಂಟ್ ಮೆಮೊಗೆ ಸಹಿ ಹಾಕಿಲ್ಲ ಎಂದು ಹೇಳಿ ಆ ಐತೀರ್ಪನ್ನು (ಅವಾರ್ಡ್) ಪ್ರಶ್ನಿಸಿದರು.
“ರಿಟ್ ಪಿಟಿಷನರ್‌ಗಳ ಪರ ವಕೀಲರು ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಬೇಕಾದ ಪರಿಹಾರದ ಮೊತ್ತದ ಕುರಿತು ಒಂದು ಮೆಮೊ ಸಲ್ಲಿಸಿದ್ದಾರೆ. ಅವರು 2012ನೇ ವರ್ಷವನ್ನು ಪರಿಗಣಿಸಿ ₹14,64,600/- ಪರಿಹಾರ ದೊರಕಬೇಕೆಂದು ತಿಳಿಸಿದ್ದಾರೆ. ಆದರೆ ನೀಡಲ್ಪಟ್ಟಿರುವುದು ಅದರ ಅರ್ಧ ಭಾಗ ಮಾತ್ರ. ಅದು ಹೇಗೇ ಇರಲಿ, ಹಕ್ಕೊತ್ತಾಯದಾರರು ಜಾಯಿಂಟ್ ಮೆಮೊಗೆ ಸಹಿ ಹಾಕಿಲ್ಲದ ಕಾರಣ, ಲೋಕ ಅದಾಲತ್ ಅವಾರ್ಡನ್ನು ರದ್ದುಪಡಿಸಿ, ಮೇಲ್ಮನವಿಯನ್ನು ಮರು ವಿಚಾರಣೆಗಾಗಿ ಪುನಃ ದಾಖಲೆಗೆ ಸೇರಿಸುವುದು ಸೂಕ್ತವೆಂದು ನಾನು ಕಂಡುಕೊಳ್ಳುತ್ತೇನೆ.”
ನ್ಯಾಯಾಲಯದ ಅವಲೋಕನ
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದಾಗ, ಜಾಯಿಂಟ್ ಮೆಮೊದಲ್ಲಿ ಪಕ್ಷಕಾರರ ಸಹಿ ಇಲ್ಲದೇ ಖಾಲಿ ಬಿಟ್ಟಿರುವುದನ್ನು ನ್ಯಾಯಾಲಯ ಗಮನಿಸಿದೆ. ಕೇವಲ ಉಭಯ ಪಕ್ಷಗಳ ವಕೀಲರು ಮತ್ತು ವಿಮಾ ಕಂಪನಿಯ ಪ್ರತಿನಿಧಿಯ ಸಹಿ ಮಾತ್ರ ಇದ್ದವು.
ನ್ಯಾಯಾಲಯವು ಕೀರ್ತಿ ವಿರುದ್ಧ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ (2021) ತೀರ್ಪನ್ನು ಉಲ್ಲೇಖಿಸಿ, ವಕೀಲರು ಮಾಡಿದ ಸಮ್ಮತಿಗೆ ಪಕ್ಷಕಾರರು ಬಾಧ್ಯರಾಗುವುದಿಲ್ಲ, ಏಕೆಂದರೆ ವಕೀಲರು ತಮ್ಮ ಕಕ್ಷಿದಾರರ ಹಕ್ಕುಗಳನ್ನು ತ್ಯಜಿಸಲು ಅಥವಾ ಅವರ ಹಿತಾಸಕ್ತಿಗೆ ವಿರುದ್ಧವಾಗಿ ಒಪ್ಪಂದ ಮಾಡಲು ಅಧಿಕಾರ ಹೊಂದಿಲ್ಲ ಎಂದು ಹೇಳಿದೆ.
ಅದೇ ರೀತಿಯಲ್ಲಿ ಕೆ.ಆರ್. ಜಯಪ್ರಕಾಶ್ ವಿರುದ್ಧ ಕೇರಳ ರಾಜ್ಯ (2021) ತೀರ್ಪನ್ನೂ ಉಲ್ಲೇಖಿಸಿ, ಕಕ್ಷಿದಾರರ ಅನುಮತಿಯಿಲ್ಲದೆ ಮಾಡಿದ ಒಪ್ಪಂದ, ಹೇಳಿಕೆ, ಸಮ್ಮತಿ, ಸಮಜಾಯಿಷಿ ಇವುಗಳಿಗೆ ಕಕ್ಷಿದಾರರು ಬದ್ಧರಾಗಬೇಕಾಗಿಲ್ಲ ಎಂದು ತಿಳಿಸಿದೆ.
ಅಂತಿಮ ಆದೇಶ
ಅದರಂತೆ, ನ್ಯಾಯಾಲಯವು ರಿಟ್ ಅರ್ಜಿಯನ್ನು ಅಂಗೀಕರಿಸಿ, ಧಾರವಾಡ ಪೀಠದ ಹೈಕೋರ್ಟ್ ಲೀಗಲ್ ಸರ್ವೀಸ್ ಸಮಿತಿ ಲೋಕ ಅದಾಲತ್‌ನಲ್ಲಿ ನೀಡಿದ ಆದೇಶವನ್ನು ರದ್ದುಪಡಿಸಿತು.
“M.F.A. No.100905/2014 ಅನ್ನು ಕಾನೂನು ಪ್ರಕಾರ ಮರು ವಿಚಾರಣೆಗಾಗಿ ಪುನಃ ದಾಖಲೆಗೆ ಸೇರಿಸಲಾಗುತ್ತದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣ ಶೀರ್ಷಿಕೆ:
Smt. Shaila Vs. The Managing Director, ICICI Lombard GIC Ltd.
ಕರ್ನಾಟಕ ಹೈಕೋರ್ಟ್