ನ್ಯಾಯಾಂಗದಲ್ಲೂ ಭ್ರಷ್ಟಾಚಾರವಿದೆ; ಜಡ್ಜ್‌ಗಳು 'ಪವಿತ್ರ ಗೋವು'ಗಳೇನಲ್ಲ: ಭ್ರಷ್ಟ 'ಕಪ್ಪು ಕುರಿ'ಗಳನ್ನು ಹೊರಹಾಕಲಾಗುತ್ತಿದೆ- ಮದ್ರಾಸ್ ಹೈಕೋರ್ಟ್
ನ್ಯಾಯಾಂಗದಲ್ಲೂ ಭ್ರಷ್ಟಾಚಾರವಿದೆ; ಜಡ್ಜ್‌ಗಳು 'ಪವಿತ್ರ ಗೋವು'ಗಳೇನಲ್ಲ: ಭ್ರಷ್ಟ 'ಕಪ್ಪು ಕುರಿ'ಗಳನ್ನು ಹೊರಹಾಕಲಾಗುತ್ತಿದೆ- ಮದ್ರಾಸ್ ಹೈಕೋರ್ಟ್
ನ್ಯಾಯಾಂಗ ಭ್ರಷ್ಟಾಚಾರದ ಕಪಿಮುಷ್ಠಿಯಿಂದ ಮುಕ್ತವಾಗಿಲ್ಲ. ನ್ಯಾಯಾಂಗದಲ್ಲೂ ಭ್ರಷ್ಟಾಚಾರ ಇದೆ ಮತ್ತು ನ್ಯಾಯಾಧೀಶರನ್ನು ಪವಿತ್ರ ಗೋವುಗಳಂತೆ ಕಾಣಬಾರದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ತಮಿಳು ಚಿತ್ರ “ಕರುಪ್ಪು” ಚಿತ್ರದಲ್ಲಿ ನ್ಯಾಯಾಂಗವನ್ನು ಕೆಟ್ಟ ಬೆಳಕಿನಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಆ ಚಿತ್ರದ ಬಿಡುಗಡೆಗೆ ನಿಷೇಧ ಹೇರುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀನಾರಾಯಣನ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಾಂಗ ಭ್ರಷ್ಟಾಚಾರದ ಉದಾಹರಣೆಗಳನ್ನು ತಾವು ಕಂಡಿದ್ದೇವೆ ಮತ್ತು ಇಂತಹ “ಕಪ್ಪು ಕುರಿಗಳನ್ನು” ಮದ್ರಾಸ್ ಹೈಕೋರ್ಟ್‌ನ ಪೂರ್ಣ ನ್ಯಾಯಪೀಠ ನಿಯಮಿತವಾಗಿ ಹೊರಹಾಕುತ್ತಿದೆ ಎಂದು ಹೇಳಿದೆ.
“ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಇದೆ ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಭ್ರಷ್ಟ ನ್ಯಾಯಾಧೀಶರು ಇದ್ದರು, ಈಗಲೂ ಇದ್ದಾರೆ. ನ್ಯಾಯಾಂಗ ಭ್ರಷ್ಟಾಚಾರದ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಮದ್ರಾಸ್ ಹೈಕೋರ್ಟ್‌ನ ಪೂರ್ಣ ನ್ಯಾಯಪೀಠ ಇಂತಹ ಕಪ್ಪು ಕುರಿಗಳನ್ನು ನಿಯಮಿತವಾಗಿ ಹೊರಹಾಕುತ್ತಿದೆ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಾಂಗದಲ್ಲಿನ ಭ್ರಷ್ಟಾಚಾರವು ವಕೀಲ ಸಮುದಾಯದ ಕೆಲವು ಸದಸ್ಯರ ಸಹಭಾಗಿತ್ವವಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭ್ರಷ್ಟರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್ ಸದಾ ಎಚ್ಚರಿಕೆಯಿಂದ ನಿಗಾವಹಿಸುತ್ತಿದೆ ಎಂದು ತಿಳಿಸಿದೆ.
“ನ್ಯಾಯಾಧೀಶರನ್ನು ಪವಿತ್ರ ಗೋವುಗಳಂತೆ ಪರಿಗಣಿಸುವ ಅಗತ್ಯವಿಲ್ಲ. ನ್ಯಾಯವೆಂಬುದು ಗುಪ್ತವಾದ ಸತ್ಪ್ರವೃತ್ತಿಯಲ್ಲ; ಸಾಮಾನ್ಯ ಜನರ ಗೌರವಯುತವಾದರೂ ಮುಕ್ತ ಟೀಕೆ ಮತ್ತು ಪರಿಶೀಲನೆಗೆ ಅದು ಒಳಪಡುವಂತಿರಬೇಕು” ಎಂದು ಲಾರ್ಡ್ ಅಟ್ಕಿನ್ ಅವರ ಮಾತುಗಳನ್ನು ಉಲ್ಲೇಖಿಸಿ ನ್ಯಾಯಾಲಯ ಹೇಳಿದೆ.
ಅರ್ಜಿದಾರರು ಚಿತ್ರವನ್ನು ನಿಷೇಧಿಸಲು ಅಥವಾ ನಿಯಂತ್ರಿಸಲು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಚಿತ್ರದ ಒಂದು ದೃಶ್ಯದಲ್ಲಿ ನ್ಯಾಯಾಧೀಶರನ್ನು ಲಂಚ ಸ್ವೀಕರಿಸುವ ಮತ್ತು ಮಾದಕ ವಸ್ತು ಸೇವಿಸುವ ವ್ಯಕ್ತಿಯಾಗಿ ಚಿತ್ರಿಸಲಾಗಿದೆ ಎಂದು ಅವರು ವಾದಿಸಿದ್ದರು. ಇಂತಹ ದೃಶ್ಯಗಳು ಸಂವಿಧಾನ ವಿರೋಧಿಯಾಗಿದ್ದು ನ್ಯಾಯಾಧೀಶರ ಮಾನಹಾನಿಗೆ ಕಾರಣವಾಗುತ್ತವೆ ಎಂದು ಅವರು ಹೇಳಿದ್ದರು. ಚಿತ್ರದ ನಿರ್ದೇಶಕ ಬಾಲಾಜಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು.
ಚಿತ್ರದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಅತಿರಂಜಿತವಾಗಿ ಚಿತ್ರಿಸಲಾಗಿದೆ ಎಂಬುದನ್ನು ನ್ಯಾಯಾಲಯ ಒಪ್ಪಿಕೊಂಡರೂ, ತಮಿಳು ಚಿತ್ರರಂಗದಲ್ಲಿ ಅತಿನಾಟಕೀಯ ಚಿತ್ರಣ ಸಾಮಾನ್ಯವೆಂದು ಹೇಳಿದೆ. ಇದನ್ನು “ಕಲಾತ್ಮಕ ಸ್ವಾತಂತ್ರ್ಯ” ಎಂದು ಕರೆಯುವ ನ್ಯಾಯಾಲಯ, ಕಲಾವಿದನು ತನ್ನದೇ ರೀತಿಯಲ್ಲಿ ಪರಿಸ್ಥಿತಿಯನ್ನು ಚಿತ್ರಿಸುವ ಹಕ್ಕು ಹೊಂದಿದ್ದಾನೆ ಎಂದು ತಿಳಿಸಿದೆ.
“ಚಿತ್ರವೆಂಬುದು ಒಂದು ಕಲಾಕೃತಿ. ಕಾನೂನಿನಿಂದ ನಿಷೇಧಿಸಲ್ಪಟ್ಟಿಲ್ಲದ ಮಟ್ಟಿಗೆ ಕಲಾವಿದನು ತನ್ನ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ. ಕಾನೂನಿನ ಮಿತಿಗಳನ್ನು ಮೀರಿ ಸೃಜನಾತ್ಮಕತೆಯಲ್ಲಿ ಹಸ್ತಕ್ಷೇಪ ಮಾಡಿದರೆ, ಸೃಜನಶೀಲತೆಯೇ ನಾಶದ ದಾರಿಗೆ ಹೋಗುತ್ತದೆ; ಸೃಜನಶೀಲತೆ ಸತ್ತರೆ ನಾಗರಿಕತೆಯ ಮೌಲ್ಯಗಳೂ ಕುಸಿಯುತ್ತವೆ,” ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನದ ವಿಧಿ 19(1)(a) ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ನ್ಯಾಯಾಲಯ ನೆನಪಿಸಿದೆ. ಮಾತು, ಬರಹ, ಮುದ್ರಣ, ಚಿತ್ರ ಅಥವಾ ಬೇರೆ ಯಾವುದೇ ಮಾಧ್ಯಮದ ಮೂಲಕ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದರಲ್ಲಿ ಒಳಗೊಂಡಿದೆ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ, ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನೀಡಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. CBFC ಚಿತ್ರವನ್ನು ನ್ಯಾಯಾಂಗ ಅವಮಾನವೆಂದು ಪರಿಗಣಿಸದಿದ್ದಾಗ, ರಿಟ್ ಅರ್ಜಿಯ ಮೂಲಕ ನ್ಯಾಯಾಲಯ ತನ್ನದೇ ಅಭಿಪ್ರಾಯವನ್ನು ಬದಲಿಯಾಗಿ ಹೇರಲಾಗುವುದಿಲ್ಲ ಎಂದು ಹೇಳಿದೆ.
ಚಿತ್ರ ನಿರ್ಮಾಪಕರ ವಿರುದ್ಧ ನ್ಯಾಯಾಂಗ ಅವಮಾನ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದರೂ, ಚಿತ್ರವು ಯಾವುದೇ ನೈಜ ನ್ಯಾಯಾಲಯದ ಗೌರವವನ್ನು ಕುಗ್ಗಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಚಿತ್ರದಲ್ಲಿ ಕಲ್ಪಿತ ನ್ಯಾಯಾಲಯದ ನ್ಯಾಯಾಧೀಶರು ಮತ್ತು ವಕೀಲರನ್ನು ಭ್ರಷ್ಟರಾಗಿ ತೋರಿಸಲಾಗಿದೆ ಹೊರತು ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಯನ್ನು ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೀಗಾಗಿ, ಚಿತ್ರವನ್ನು ನಿಷೇಧಿಸಲು ಅಥವಾ ನಿಯಂತ್ರಿಸಲು ಯಾವುದೇ ಆಧಾರವಿಲ್ಲವೆಂದು ಹೇಳಿ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಪ್ರಕರಣದ ಹೆಸರು: RS Tamilvendan v. The Secretary and others
Case No.: WP No. 20286/2026, Dated 27-05-2026