-->
ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ, ಪರಿಹಾರಕ್ಕೆ ಒಪ್ಪಿದ ಆರೋಪಿ: ಶಿಕ್ಷೆಯನ್ನು ವರ್ಷದಿಂದ ಒಂದು ದಿನಕ್ಕೆ ಇಳಿಸಿದ ಕರ್ನಾಟಕ ಹೈಕೋರ್ಟ್‌

ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ, ಪರಿಹಾರಕ್ಕೆ ಒಪ್ಪಿದ ಆರೋಪಿ: ಶಿಕ್ಷೆಯನ್ನು ವರ್ಷದಿಂದ ಒಂದು ದಿನಕ್ಕೆ ಇಳಿಸಿದ ಕರ್ನಾಟಕ ಹೈಕೋರ್ಟ್‌

ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ, ಪರಿಹಾರಕ್ಕೆ ಒಪ್ಪಿದ ಆರೋಪಿ: ಶಿಕ್ಷೆಯನ್ನು ವರ್ಷದಿಂದ ಒಂದು ದಿನಕ್ಕೆ ಇಳಿಸಿದ ಕರ್ನಾಟಕ ಹೈಕೋರ್ಟ್‌





ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗದೆ ಸಂತ್ರಸ್ತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿರುವುದು ಶಿಕ್ಷೆಯನ್ನು ಕಡಿಮೆ ಮಾಡುವುದಕ್ಕೆ ಕಾರಣವಾಗಿರುವ ಅಂಶವಾಗಿದೆ ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್, ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಮತ್ತು ಪರಿಹಾರಕ್ಕೆ ಒಪ್ಪಿದ ಆರೋಪಿಯ ಶಿಕ್ಷೆಯನ್ನು ವರ್ಷದಿಂದ ಒಂದು ದಿನಕ್ಕೆ ಇಳಿಸಿ ತೀರ್ಪು ಪ್ರಕಟಿಸಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅರ್ಜಿದಾರರ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ. ಮೃತ ವ್ಯಕ್ತಿಯ ಪತ್ನಿ ಮತ್ತು ಮಗನಿಗೆ ತಲಾ ಐವತ್ತು ಸಾವಿರ ರೂಪಾಯಿ ಪರಿಹಾರದ ಮೊತ್ತವನ್ನು ಜೂನ್‌ ಅಂತ್ಯದ ಒಳಗೆ ಪಾವತಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.


ಘಟನೆಯ ವಿವರ:

2015 ಜುಲೈ 15 ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬೀಚ್ ರಸ್ತೆ ಬಳಿ ರಿಯಾಜ್ ಅಹ್ಮದ್ ಎಂಬವರು ಚಲಾಯಿಸುತ್ತಿದ್ದ ಕಾರು ಆನಂದ್ ಶೆಟ್ಟಿ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿತ್ತು.


ರಸ್ತೆ ಅಪಘಾತ ನಡೆದ ತಕ್ಷಣ ರಿಯಾಜ್ ಮತ್ತು ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದ ಆನಂದ್ ಶೆಟ್ಟಿ ಅವರನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೆ, ದುರದೃಷ್ಟವಶಾತ್ ಆನಂದ್ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಸಾವನ್ನಪ್ಪಿದ್ದರು.


ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ಸತ್ರ ನ್ಯಾಯಾಲಯವು ರಿಯಾಜ್‌ಗೆ ಒಂದು ವರ್ಷದ ಸಾಧಾರಣ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಶ್ನಿಸಿ ರಿಯಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.


ಆರೋಪಿ ಅಪಘಾತ ಸಂಭವಿಸಿದ ತಕ್ಷಣ ಸ್ಥಳದಿಂದ ಓಡಿ ಹೋಗದೆ, ಗಾಯಾಳುವನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿರುವುದನ್ನು ನ್ಯಾಯಾಲಯ ಗಮನಿಸಿತು. ಹಾಗೂ, ನ್ಯಾಯ ಮಂಡಳಿ ಪರಿಹಾರವಲ್ಲದೇ, ಹೆಚ್ಚುವರಿ ಪರಿಹಾರ ನೀಡಿದರೆ ಶಿಕ್ಷೆ ಕಡಿತಗೊಳಿಸಲು ಒಪ್ಪಿಗೆ ಸೂಚಿಸಲಾಗುವುದು ಎಂದು ಮೃತರ ಕುಟುಂಬದವರು ತಿಳಿಸಿದ್ದರು. ಈ ಅಂಶ ದಾಖಲಿಸಿಕೊಂಡ ಪೀಠವು ಅಂದಿನ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಶಿಕ್ಷೆ ವಿಧಿಸಿತು.


ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗದೆ ಸಂತ್ರಸ್ತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿರುವುದು ಶಿಕ್ಷೆಯನ್ನು ಕಡಿಮೆ ಮಾಡುವುದಕ್ಕೆ ಕಾರಣವಾಗಿರುವ ಅಂಶವಾಗಿದೆ. ಅಲ್ಲದೇ, ಶಿಕ್ಷೆಗೆ ಗುರಿಯಾಗಿರುವ ರಿಯಾಜ್ ಕೂಡ ನಂತರದ ದಿನಗಳಲ್ಲಿ ಮತ್ತೊಂದು ಅಪಘಾತಕ್ಕೆ ಒಳಗಾಗಿ ಬಲಗಾಲಿಗೆ ರಾಡ್ ಅಳವಡಿಸಿಕೊಂಡಿದ್ದು, ಸದ್ಯ ಚಾಲನೆ ಮಾಡಲು ಸಾಧ್ಯವಾಗದೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ ಎಂಬ ಅಂಶ ದಾಖಲೆಗಳಿಂದ ಗೊತ್ತಾಗಲಿದೆ ಎಂದು ನ್ಯಾಯಾಲಯ ಹೇಳಿದೆ.


ಮೃತರ ಪತ್ನಿ ಮತ್ತು ಮಗನಿಗೆ ತಲಾ ಐವತ್ತು ಸಾವಿರ ರೂಪಾಯಿ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿತು. ಈ ಮೊತ್ತವನ್ನು ಎರಡು ಕಂತುಗಳಲ್ಲಿ ಜೂನ್ 30ರ ಒಳಗಾಗಿ ಪಾವತಿಸಬೇಕು. ಒಂದು ವೇಳೆ ಈ ಹಣ ಪಾವತಿಸಲು ವಿಫಲವಾದರೆ, ಹಳೆಯ ಒಂದು ವರ್ಷದ ಜೈಲು ಶಿಕ್ಷೆ ತಾನಾಗಿಯೇ ಮರುಸ್ಥಾಪನೆಯಾಗಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu