ತನಿಖೆ ಹೆಸರಿನಲ್ಲಿ ನೋಟೀಸ್‌ನಲ್ಲಿ ಇದು ಕಡ್ಡಾಯವಾಗಿ ಇರಲೇಬೇಕು: ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ತಾಕೀತು
ತನಿಖೆ ಹೆಸರಿನಲ್ಲಿ ನೋಟೀಸ್‌ನಲ್ಲಿ ಇದು ಕಡ್ಡಾಯವಾಗಿ ಇರಲೇಬೇಕು: ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ತಾಕೀತು
ತನಿಖೆ ಹೆಸರಿನಲ್ಲಿ ವಿನಾಕಾರಣ ಠಾಣೆಗೆ ಕರೆದು ಹಿಂಸೆ ನೀಡಿದರೆ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಕಾನೂನುಬದ್ಧವಾಗಿ ನೋಟೀಸ್ ನೀಡದೇ ಇದ್ದರೆ ಅದೊಂದು ಗಂಭೀರ ಅಪರಾಧ ಎಂದು ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ತನಿಖೆಯ ಹೆಸರಿನಲ್ಲಿ ವಿನಾಕಾರಣ ಠಾಣೆಗೆ ಕರೆದು ಕಿರುಕುಳ ನೀಡುವುದು ಮತ್ತು ದಾಖಲಾಗಿರುವ ಅಪರಾಧದ ಹೊರತುಪಡಿಸಿ ವಿಚಾರಣೆ ನಡೆಸಿದರೆ ಸಂಬಂಧಪಟ್ಟ ತನಿಖಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗೆ ವಾರ್ನಿಂಗ್ ಮಾಡಿದೆ.
ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿಗೊಳಿಸುವಾಗ ಕಾನೂನಿನ ಯಾವ ಕಲಂ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ಸಮನ್ಸ್ ನೀಡಲಾಗಿದೆ ಎಂಬ ವಿವರ ಮತ್ತು ನೀಡಿದ ಅಧಿಕಾರಿಯ ಹೆಸರು, ಅವರ ಹುದ್ದೆ ಕಡ್ಡಾಯವಾಗಿ ನಮೂದಾಗಿರಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಬೆಂಗಳೂರಿನ ವರುಣ್ ಜ್ಯೂವೆಲ್ಲರ್ ಸ್ಥಾಪಕ ನರೇಶ್ ಕುಮಾರ್ ಸಿಯಾಲ್ ಮತ್ತು ಪ್ರಕಾಶ್ ಚಾಂದ್ ಸಿಯಾಲ್ ಬೆಂಗಳೂರಿನ ಅತ್ತಿಬೆಲೆ ಠಾಣೆಯ ಪೊಲೀಸರು ಸಹಿ ಮತ್ತು ನಿರ್ದಿಷ್ಟ ಸೆಕ್ಷನ್ ಉಲ್ಲೇಖಿಸದೇ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಎಚ್ಚರಿಕೆ ನೀಡಿದೆ.
ಪೊಲೀಸರು ಜಾರಿಗೊಳಿಸಿದ ನೋಟಿಸ್‌ನಲ್ಲಿ ಯಾವ ಕಾನೂನಿನ ಅಡಿ ಸಮನ್ಸ್ ನೀಡಲಾಗಿದೆ ಎಂಬ ಉಲ್ಲೇಖವಿಲ್ಲ. ಜೊತೆಗೆ, ನೋಟಿಸ್ ನೀಡಿದ ಅಧಿಕಾರಿಯ ಹೆಸರು ಮತ್ತು ಹುದ್ದೆಯೂ ಇಲ್ಲದಿರುವುದರಿಂದ ಈ ನೋಟೀಸಿನ ಸಾಚಾತಾನದ ಬಗ್ಗೆ ನ್ಯಾಯಪೀಠ ಅನುಮಾನ ವ್ಯಕ್ತಪಡಿಸಿದೆ.
ಯಾವ ಅಧಿಕಾರದ ಅಡಿಯಲ್ಲಿ ಈ ನೋಟಿಸ್ ನೀಡಲಾಗಿದೆ ಮತ್ತು ಅಧಿಕಾರಿಯ ಹೆಸರು ಯಾಕೆ ನಮೂದಿಸಿಲ್ಲ ಎಂಬ ಬಗ್ಗೆ ಎರಡು ವಾರಗಳ ಒಳಗಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಪ್ರತಿವಾದಿ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನಾಲ್ಕನೇ ವಾರಕ್ಕೆ ನಿಗದಿಪಡಿಸಿದೆ.
ನಿಯಮಾವಳಿಗಳ ಸ್ಪಷ್ಟ ಉಲ್ಲೇಖವಿಲ್ಲದೇ ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಯಿಸಬಾರದು. ಒಂದು ವೇಳೆ ಕರೆಯಿಸಿದರೂ ಯಾವುದೇ ಕಿರುಕುಳ ನೀಡದೇ, ನಿಗದಿತ ಅವಧಿಯೊಳಗೆ ವಿಚಾರಣೆ ಮುಗಿಸಬೇಕು ಎಂದು ಸೂಚಿಸಿದೆ.
ಕಾನೂನು ಹೊರತುಪಡಿಸಿ ಅಧಿಕಾರ ಚಲಾಯಿಸಲು ಅವಕಾಶವಿಲ್ಲ. ವಿನಾಕಾರಣ ಜನರನ್ನು ಪೊಲೀಸರು ಠಾಣೆಗೆ ಕರೆಯಲಾಗದು. ಯಾವ ಅಪರಾಧ ಕೃತ್ಯದ ಆರೋಪದ ಮೇಲೆ ತಮ್ಮನ್ನು ತನಿಖೆಗೆ ಕರೆಯಲಾಗುತ್ತದೆ ಎಂಬುದನ್ನು ಪೊಲೀಸರು ವಿವರಿಸಬೇಕು. ಇ-ಆಫೀಸ್ ನನ್ನು ಬಳಕೆ ಮಾಡಿ ಡಿಜಿಟಲ್ ಸಹಿ ಹೊಂದಿರುವ ನೋಟಿಸ್ ಮಾತ್ರ ನೀಡಬೇಕು. ಅದನ್ನು ಏಕೆ ಮಾಡಿಲ್ಲ ಎಂದು ಪೀಠ ಪ್ರಶ್ನಿಸಿದೆ.
ಪ್ರಕರಣದ ಹಿನ್ನೆಲೆ: ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ 26 ವರ್ಷದ ಮೋಹನ್ ಎಂಬ ವ್ಯಕ್ತಿಯು ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿ, ಸಾಲ ನೀಡಿರುವವರ ಕಿರುಕುಳ ತಾಳಲಾರದೇ ತಾಯಿ, ರೋಗ ಬಾದಿತಳಾದ ಅಕ್ಕನಿಗೆ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದನು. ಅಕ್ಕನ ಮಗನನ್ನು ಕತ್ತು ಕೊಯ್ದು ಸಾಯಿಸಿ, ತಾನೂ ಕೊಲೆಗೆ ಯತ್ನಿಸಿದ್ದನು. ಅದೃಷ್ಟವಶಾತ್ ಅಕ್ಕನ ಮಗ ಮತ್ತು ಮೋಹನ್ ಬದುಕುಳಿದಿದ್ದರು.
ಕೊಲೆಗೂ ಮುನ್ನ ಮೋಹನ್ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಲ ಪಡೆದಿರುವುದನ್ನು ತೀರಿಸಲಾಗದೇ ಅವರ ಕಿರುಕುಳದಿಂದ ಸಾವಿಗೆ ಮುಂದಾಗಿರುವುದಾಗಿ ವಿವರಿಸಿದ್ದರು. ಈ ಪ್ರಕರಣದ ಸಂಬಂಧ ಅರ್ಜಿದಾರರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ಯಾವುದೇ ಪ್ರಕರಣ ದಾಖಲಾಗದಿದ್ದರೂ ವಿನಾ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆ. ಅರ್ಜಿದಾರರಿಗೆ ತಡವಾಗಿ ನೋಟಿಸ್ ತಲುಪಿದ್ದರೂ ಸಹ ಠಾಣೆಗೆ ಹಾಜರಾಗಿದ್ದರು.
ನೋಟಿಸ್‌ನಲ್ಲಿ ಯಾವ ಸೆಕ್ಷನ್ ಅಡಿ ಅಪರಾಧಕ್ಕೆ ಅರ್ಜಿದಾರರನ್ನು ಕರೆಯಲಾಗಿದೆ ಎಂದು ಉಲ್ಲೇಖಿಸಲಾಗಿಲ್ಲ. ಅಲ್ಲದೇ, ತನಿಖಾಧಿಕಾರಿಯ ಸಹಿ ಮತ್ತು ಪದನಾಮವನ್ನೂ ಉಲ್ಲೇಖಿಸಿಲ್ಲ. ಪೊಲೀಸರು ಪ್ರಕರಣದ ತನಿಖೆ ಹೊರತುಪಡಿಸಿ, ಇತರ ಅಂಶಗಳು ಅಂದರೆ, ವ್ಯಾಪಾರದ ವಹಿವಾಟು ಹಾಗೂ ಲಾಭದ ಬಗ್ಗೆ ಇಡೀ ದಿನ ವಿಚಾರಣೆ ನಡೆಸಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಪೀಠಕ್ಕೆ ವಿವರಿಸಿದ್ದರು.