-->
14 ವರ್ಷಗಳ ಹಳೆ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ: ಗಣನೀಯ ತೊಂದರೆ, ವಿಳಂಬ ಸಂದರ್ಭದಲ್ಲಿ ಮಧ್ಯಸ್ಥಿಕೆ ತೀರ್ಪನ್ನು ಮಾರ್ಪಡಿಸಬಹುದು ಎಂದ ತೀರ್ಪು

14 ವರ್ಷಗಳ ಹಳೆ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ: ಗಣನೀಯ ತೊಂದರೆ, ವಿಳಂಬ ಸಂದರ್ಭದಲ್ಲಿ ಮಧ್ಯಸ್ಥಿಕೆ ತೀರ್ಪನ್ನು ಮಾರ್ಪಡಿಸಬಹುದು ಎಂದ ತೀರ್ಪು

14 ವರ್ಷಗಳ ಹಳೆ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ: ಗಣನೀಯ ತೊಂದರೆ, ವಿಳಂಬ ಸಂದರ್ಭದಲ್ಲಿ ಮಧ್ಯಸ್ಥಿಕೆ ತೀರ್ಪನ್ನು ಮಾರ್ಪಡಿಸಬಹುದು ಎಂದ ತೀರ್ಪು





ಗಣನೀಯ ತೊಂದರೆ ಹಾಗೂ ವಿಳಂಬ ಉಂಟಾಗುವ ಸಂದರ್ಭಗಳಲ್ಲಿ ಮಧ್ಯಸ್ಥಿಕೆ ತೀರ್ಪನ್ನು ರದ್ದುಪಡಿಸುವ ಬದಲು ನ್ಯಾಯಾಲಯಗಳು ಅದನ್ನು ಮಾರ್ಪಡಿಸಬಹುದು ಎಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ 14 ವರ್ಷಗಳ ಹಳೆಯ ವಿವಾದಕ್ಕೆ ತೆರೆ ಎಳೆದಿದೆ.


ಮಧ್ಯಸ್ಥಿಕೆ ತೀರ್ಪಿನಲ್ಲಿ ದೋಷಗಳಿದ್ದರೂ, ಅದನ್ನು ಸಂಪೂರ್ಣವಾಗಿ ರದ್ದುಪಡಿಸಿ ಪಕ್ಷಕಾರರನ್ನು ಮತ್ತೊಮ್ಮೆ ಮಧ್ಯಸ್ಥಿಕೆ ಮತ್ತು ನ್ಯಾಯಾಂಗ ಹೋರಾಟದ ಸುತ್ತಿಗೆ ತಳ್ಳುವ ಬದಲು, ನ್ಯಾಯ ಸಾಧನೆಗಾಗಿ ಸಂವಿಧಾನದ ವಿಧಿ 142 ಅಡಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಮಾರ್ಪಡಿಸಿ ಅಂತಿಮ ಪರಿಹಾರ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.


ಈ ಪ್ರಕರಣದಲ್ಲಿ, 2010ರಲ್ಲಿ ನಡೆದ ಪುನರ್‌ನಿರ್ಮಾಣ ಒಪ್ಪಂದದ ಪ್ರಕಾರ, ದೆಹಲಿಯ ಭಯಾನಾ ಕುಟುಂಬವು ತಮ್ಮ ಹಳೆಯ ಕಟ್ಟಡವನ್ನು ಮರುನಿರ್ಮಿಸಲು ಬಿಲ್ಡರ್‌ಗೆ ಅವಕಾಶ ನೀಡಿತ್ತು. ಪ್ರತಿಯಾಗಿ ಬಿಲ್ಡರ್‌ಗೆ ಕಟ್ಟಡದ ಎರಡನೇ ಮಹಡಿಯನ್ನು ಉಳಿಸಿಕೊಳ್ಳುವ ಹಕ್ಕು ನೀಡಲಾಗಿತ್ತು. ಜೊತೆಗೆ, ಬಿಲ್ಡರ್ ಮಾಲೀಕರಿಗೆ ₹ 64 ಲಕ್ಷವನ್ನು ಮುಂಗಡ ಹಣ ಮತ್ತು ಪರಿಹಾರವಾಗಿ ಪಾವತಿಸಬೇಕಿತ್ತು.


ಒಪ್ಪಂದದ ಪ್ರಕಾರ, ನಿರ್ಮಾಣ ಕಾರ್ಯವನ್ನು 12 ತಿಂಗಳೊಳಗೆ ಪೂರ್ಣಗೊಳಿಸಬೇಕಾಗಿದ್ದು, ಹೆಚ್ಚುವರಿ 2 ತಿಂಗಳ ಸಡಿಲಾವಧಿಯೂ ನೀಡಲಾಗಿತ್ತು. ಅದಾದ ಬಳಿಕವೂ ಕೆಲಸ ಪೂರ್ಣಗೊಳ್ಳದಿದ್ದರೆ, ಪ್ರತಿದಿನ ₹10,000 ದಂಡ ಪಾವತಿಸಬೇಕೆಂದು ನಿಗದಿಪಡಿಸಲಾಗಿತ್ತು.


ನ್ಯಾಯಮೂರ್ತಿ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು, Gayatri Balasamy vs. ISG Novasoft Technologies Limited (2025) 7 SCC 1 ಪ್ರಕರಣವನ್ನು ಉಲ್ಲೇಖಿಸಿ ಹೀಗೆ ಹೇಳಿತು:


“ಮಧ್ಯಸ್ಥಿಕೆ ತೀರ್ಪು ಸ್ಪಷ್ಟ ಕಾನೂನುಬಾಹಿರತೆಯಿಂದ ಕೂಡಿರುವುದರಿಂದ, ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 34(2A) ಅಡಿಯಲ್ಲಿ ಅದನ್ನು ರದ್ದುಪಡಿಸಬಹುದಾಗಿದೆ. ಆದಾಗ್ಯೂ, ಪಕ್ಷಕಾರರು 2012ರಿಂದಲೇ ಈ ವಿವಾದದಲ್ಲಿ ನ್ಯಾಯಾಂಗ ಹೋರಾಟ ನಡೆಸುತ್ತಿರುವುದನ್ನು ಪರಿಗಣಿಸಿದಾಗ, ಅದನ್ನು ರದ್ದುಪಡಿಸುವುದು ನ್ಯಾಯದ ಹಿತಾಸಕ್ತಿಗೆ ಅನುಕೂಲಕರವಾಗುವುದಿಲ್ಲ. ತೀರ್ಪನ್ನು ರದ್ದುಪಡಿಸುವುದರಿಂದ ಗಣನೀಯ ತೊಂದರೆ ಮತ್ತು ಅನಗತ್ಯ ವಿಳಂಬ ಉಂಟಾಗುವ ಸಂದರ್ಭಗಳಲ್ಲಿ, ಹಿಂದಿನ ತೀರ್ಪಿನಲ್ಲಿ ನಿಗದಿಪಡಿಸಿದ ಮಿತಿಗಳೊಳಗೆ ನ್ಯಾಯಾಲಯವು ಮಾರ್ಪಡಿಬಹುದು. ಜೊತೆಗೆ, ಪಕ್ಷಕಾರರ ನಡುವೆ ಸಾರ್ಥಕ ನ್ಯಾಯ ಸಾಧಿಸಲು, ಅವರನ್ನು ಮತ್ತೊಂದು ಹಂತದ ವ್ಯಾಜ್ಯಕ್ಕೆ ತಳ್ಳುವ ಬದಲು, ಸಂವಿಧಾನದ ವಿಧಿ 142ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನ್ನ ಅಧಿಕಾರವನ್ನು ಬಳಸಬಹುದು. ಆದ್ದರಿಂದ, ಈ ವಿವಾದಕ್ಕೆ ಅಂತಿಮ ತೆರೆ ಎಳೆಯುವ ಉದ್ದೇಶದಿಂದ ನಾವು ವಿಧಿ 142ರ ಅಧಿಕಾರವನ್ನು ಚಲಾಯಿಸುತ್ತಿದ್ದೇವೆ.”


ಈ ಪ್ರಕರಣದಲ್ಲಿ, ನಿರ್ಮಾಣ ಕಾರ್ಯವು ಕೇವಲ ನೆಲಮಾಳಿಗೆ, ಸ್ಟಿಲ್ಟ್ ಮತ್ತು ನೆಲಮಹಡಿ ನಿರ್ಮಾಣದ ನಂತರ 2011ರ ಆಗಸ್ಟ್‌ನಲ್ಲಿ ಸ್ಥಗಿತಗೊಂಡಿತ್ತು. ನಂತರ ಮಾಲೀಕರು 2011ರ ನವೆಂಬರ್‌ನಲ್ಲಿ ಒಪ್ಪಂದವನ್ನು ರದ್ದುಪಡಿಸಿದರು. ಬಳಿಕ ವಿವಾದವನ್ನು ಮಧ್ಯಸ್ಥಿಕೆಗೆ ಒಪ್ಪಿಸಲಾಯಿತು.


2013ರಲ್ಲಿ ಮಧ್ಯಸ್ಥರು (Arbitrator) ಬಿಲ್ಡರ್ ಒಪ್ಪಂದ ಉಲ್ಲಂಘನೆ ಮಾಡಿರುವುದಾಗಿ ಕಂಡು ಪರಿಹಾರಧನ ನೀಡಿದರು. ಜೊತೆಗೆ, ಬಿಲ್ಡರ್‌ನ ಪ್ರತಿದಾವೆಯನ್ನು ಭಾಗಶಃ ಅಂಗೀಕರಿಸಿದರು. ನಂತರ ಈ ಪ್ರಕರಣವು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ, 1996ರ ಸೆಕ್ಷನ್ 34 ಮತ್ತು 37ರ ಅಡಿಯಲ್ಲಿ ದೆಹಲಿ ಹೈಕೋರ್ಟ್ ಮೂಲಕ ಸುಪ್ರೀಂ ಕೋರ್ಟ್‌ಗೆ ತಲುಪಿತು.


ಸುಪ್ರೀಂ ಕೋರ್ಟ್, ಮಧ್ಯಸ್ಥಿಕೆ ತೀರ್ಪಿನಲ್ಲಿ ಒಪ್ಪಂದದ ದಂಡದ ಲೆಕ್ಕಾಚಾರ ಸೇರಿದಂತೆ ಹಲವು ಅಂಶಗಳಲ್ಲಿ ಸ್ಪಷ್ಟ ಕಾನೂನುಬಾಹಿರತೆ (Patent Illegality) ಇರುವುದನ್ನು ಗಮನಿಸಿತು. ಆದರೆ, ಈ ಹಂತದಲ್ಲಿ ತೀರ್ಪನ್ನು ರದ್ದುಪಡಿಸಿದರೆ 2012ರಿಂದ ಬಾಕಿ ಇರುವ ವಿವಾದ ಮತ್ತೊಮ್ಮೆ ಆರಂಭವಾಗಿ, ಪಕ್ಷಕಾರರು ಹೊಸ ಮಧ್ಯಸ್ಥಿಕೆ ಮತ್ತು ಹೊಸ ನ್ಯಾಯಾಂಗ ಹೋರಾಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.


ಪೀಠವು ಹೀಗೆ ಹೇಳಿತು:


“21.10.2013ರ ಮಧ್ಯಸ್ಥಿಕೆ ತೀರ್ಪು ಹಲವು ರೀತಿಯಲ್ಲಿ ಸ್ಪಷ್ಟ ಕಾನೂನುಬಾಹಿರತೆಯಿಂದ ಕೂಡಿದೆ. 09.04.2010ರ ಒಪ್ಪಂದದ ಷರತ್ತು 7 ಮತ್ತು ಷರತ್ತು 13ರ ಅಡಿಯಲ್ಲಿ ಮಾಲೀಕರಿಗೆ ಸಿಗಬೇಕಾದ ನ್ಯಾಯಸಮ್ಮತ ಹಕ್ಕುಗಳನ್ನು ಮಧ್ಯಸ್ಥರು ನಿರಾಕರಿಸಬಾರದು. ಒಪ್ಪಂದದಲ್ಲೇ ನಿರ್ಮಾಣ ವಿಳಂಬಕ್ಕೆ ಒಂದು ವಿಧದ ಪರಿಹಾರ ಮತ್ತು ಒಪ್ಪಂದ ಉಲ್ಲಂಘನೆಗೆ ಮತ್ತೊಂದು ವಿಧದ ಪರಿಹಾರ ಪ್ರತ್ಯೇಕವಾಗಿ ನೀಡಬೇಕೆಂದು ಸ್ಪಷ್ಟವಾಗಿದ್ದಾಗ, ಷರತ್ತು 7ರ ಅಡಿಯಲ್ಲಿ ಮಾತ್ರ ಪರಿಹಾರ ನೀಡಿ, ಷರತ್ತು 13ರ ಅಡಿಯಲ್ಲಿ ಜಪ್ತಿ ಮಾಡುವ ಹಕ್ಕನ್ನು ನಿರಾಕರಿಸುವುದು ಮಧ್ಯಸ್ಥರಿಗೆ ಅಧಿಕಾರವಿರಲಿಲ್ಲ. ಇದು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 34(2A) ಅಡಿಯಲ್ಲಿ ಸ್ಪಷ್ಟ ಕಾನೂನುಬಾಹಿರತೆಯಾಗಿದೆ. ಆದಾಗ್ಯೂ, ಮಾಲೀಕರು ಈ ಅಂಶದ ಕುರಿತು ಸೆಕ್ಷನ್ 34ರ ಅಡಿಯಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ಆದ್ದರಿಂದ, ಈ ವಿಷಯದಲ್ಲಿ ತೀರ್ಪು ಅಂತಿಮವಾಗಿದೆ.”


ಅಂತಿಮವಾಗಿ, ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ತೀರ್ಪನ್ನೇ ಮಾರ್ಪಾಡು ಮಾಡಿ, 2011ರ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗಿನ ಸೀಮಿತ ಅವಧಿಗೆ ಮಾಲೀಕರು ₹6.3 ಲಕ್ಷ ಒಪ್ಪಂದದ ದಂಡ ಪಡೆಯಲು ಅರ್ಹರು ಎಂದು ತೀರ್ಮಾನಿಸಿತು. ಅದೇ ವೇಳೆ, ಬಿಲ್ಡರ್‌ಗೆ ಮರುಪಾವತಿ ಮತ್ತು ನಿರ್ಮಾಣ ವೆಚ್ಚ ಸೇರಿ ಒಟ್ಟು ₹81.92 ಲಕ್ಷ ಪಡೆಯುವ ಹಕ್ಕು ಇದೆ ಎಂದು ಘೋಷಿಸಿತು.


ಹಿಂದಿನ ಆದೇಶಗಳ ಪ್ರಕಾರ ಈಗಾಗಲೇ ಪಾವತಿಸಲಾದ ಮೊತ್ತಗಳನ್ನು ಸರಿಹೊಂದಿಸಿದ ಬಳಿಕ, ಉಳಿದ ಮೊತ್ತವನ್ನು ಪಾವತಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತು. ಜೊತೆಗೆ, ಎರಡೂ ಪಕ್ಷಗಳಿಗೆ ಬಡ್ಡಿ ಪಡೆಯುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿತು.


ಪ್ರಕರಣದ ಶೀರ್ಷಿಕೆ: ರೂಪೇಶ್ ಭಯಾನಾ ಮತ್ತೊಬ್ಬರು ವಿರುದ್ಧ ಕುನಾಲ್ ಸೇಟ್ ಮತ್ತೊಬ್ಬರು

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu