LAW POINT 42 | ಕಾನೂನು ಪ್ರಕ್ರಿಯೆಯಲ್ಲಿ ವಕಾಲತ್‌ನಾಮೆ ಮಹತ್ವ; ವಕೀಲರ ಪಾತ್ರ, ಕಕ್ಷಿದಾರರ ಜವಾಬ್ದಾರಿ ಏನು..?
ಕಾನೂನು ಪ್ರಕ್ರಿಯೆಯಲ್ಲಿ ವಕಾಲತ್‌ನಾಮೆ ಮಹತ್ವ; ವಕೀಲರ ಪಾತ್ರ, ಕಕ್ಷಿದಾರರ ಜವಾಬ್ದಾರಿ ಏನು..?
ಕಾನೂನು ಪ್ರಕ್ರಿಯೆಗಳಲ್ಲಿ ವಕಾಲತ್ / ವಕಾಲತ್‌ನಾಮ ಮಹತ್ವದ ಪಾತ್ರ ವಹಿಸುತ್ತದೆ. ವಕಾಲತ್‌ನಾಮಾ ಎಂದರೆ ಒಬ್ಬ ಕಕ್ಷಿದಾರನು ತನ್ನ ಪರವಾಗಿ ವಾದಿಸಲು ವಕೀಲರೊಬ್ಬರಿಗೆ ಕಾನೂನುಬದ್ಧವಾಗಿ ನೀಡುವ ಅಧಿಕಾರ. ಇದೊಂದು ಅಧಿಕೃತ ಲಿಖಿತ ದಾಖಲೆಯಾಗಿದೆ.
ಕಾನೂನುಬದ್ಧ ಅಧಿಕಾರ:
ನ್ಯಾಯಾಲಯದಲ್ಲಿ ಸಂಬಂಧಿತ ಪಕ್ಷಕಾರರನ್ನು ವಕೀಲರು ಪ್ರತಿನಿಧಿಸಲು, ವಾದ ಮಂಡಿಸಲು ಮತ್ತು ಅವರ ಪರವಾಗಿ ದಾಖಲೆಗಳನ್ನು ಸಲ್ಲಿಸಲು ಇದು ಅಧಿಕೃತ ಅನುಮತಿಯನ್ನು ನೀಡುತ್ತದೆ.
ವಕೀಲರು ಕೇವಲ ಕಕ್ಷಿದಾರರು ಅನುಮತಿಸಿರುವ ಮಿತಿಯೊಳಗೆ ಮಾತ್ರ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಕಕ್ಷಿದಾರರಿಗೆ ಮತ್ತು ವಕೀಲರಿಗೆ ರಕ್ಷಣೆ ಒದಗಿಸುತ್ತದೆ. ಯಾರೋ ಅನ್ಯ ವಕೀಲರು ಅಥವಾ ಅನಧಿಕೃತ ವ್ಯಕ್ತಿಗಳು ತಮ್ಮಿಚ್ಛೆಗೆ ಅನುಗುಣವಾಗಿ ಪಕ್ಷಕಾರರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗುವುದನ್ನು ಇದು ತಡೆಯುತ್ತದೆ.
ನ್ಯಾಯಾಲಯಗಳಲ್ಲಿ ಪಕ್ಷಕಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸಬೇಕು. ಈ ಬಗ್ಗೆ ವಿವಿಧ ನ್ಯಾಯಾಲಯಗಳು ಹಲವು ತೀರ್ಪುಗಳನ್ನು ನೀಡಿವೆ. ಈ ಸಾಲಿಗೆ ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಕೂಡ ಸೇರುತ್ತದೆ. 23-12-2024ರಂದು "ಅನುಜ್ ಕುಮಾರ್ ಚೌಹಾಣ್ Vs ರಾಜ್ಯಪಾಲರು, ದೆಹಲಿ ಕೇಂದ್ರಾಡಳಿತ ಪ್ರದೇಶ ಮತ್ತಿತರರು" ಪ್ರಕರಣದಲ್ಲಿ, "ಪಕ್ಷಕಾರರಿಂದ ನಿಯೋಜನೆಗೊಂಡ ಯಾವುದೇ ವ್ಯಕ್ತಿಯು ಪಕ್ಷಕಾರರನ್ನು ಪ್ರತಿನಿಧಿಸುವಂತಿಲ್ಲ" ಎಂದು ಸ್ಪಷ್ಟಪಡಿಸಿದ್ದು, ವಕೀಲರಲ್ಲದವರಿಗೆ ವಾದಿಸಲು ಅವಕಾಶ ನೀಡುವುದು ಪಕೀಲರ ಕಾಯಿದೆಯ ನಿಬಂಧನೆಗಳೊಂದಿಗೆ ಮೂಲಭೂತವಾಗಿ ಅಸಮಂಜಸವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪಕ್ಷಕಾರರು ವಕೀಲರಿಗೆ ಮಾತ್ರ ವ್ಯಾಜ್ಯದಲ್ಲಿ ತಮ್ಮನ್ನು ಪ್ರತಿನಿಧಿಸಲು ಅಧಿಕಾರ ನೀಡಬಹುದು. ಪಕ್ಷಕಾರರು ಸಹಿ ಹಾಕಿದ ಅಧಿಕೃತ ವಕಾಲತ್‌ನಾಮವನ್ನು ಹಾಜರುಪಡಿಸಿದರೆ ಮಾತ್ರ ಪ್ರಕರಣದಲ್ಲಿ ವಕೀಲರು ಹಾಜರಾಗಲು ಅನುಮತಿ ಇದೆ. ಅದನ್ನು ಹೊರತುಪಡಿಸಿ, ಪಕ್ಷಕಾರರು ನೀಡುವ ಅಧಿಕಾರ ಪತ್ರಗಳ ಆಧಾರದ ಮೇರೆಗೆ ವಕೀಲರಲ್ಲದವರು ಅಥವಾ ಅವರ ಏಜೆಂಟರುಗಳಿಗೆ ಹಾಜರಾಗಲು ಅನುಮತಿ ನೀಡುವ ಅಭ್ಯಾಸವನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸಬೇಕು ಎಂದು ತೀರ್ಪು ನೀಡುವ ಮೂಲಕ ವಕಾಲತ್‌ನಾಮಾದ ಮಹತ್ವವನ್ನು ಎತ್ತಿ ತೋರಿಸಿದೆ.
14-11-2024ರಂದು ಕರ್ನಾಟಕ ಹೈಕೋರ್ಟ್ ಹೊರಡಿಸಿದ ತೀರ್ಪು ಕೂಡ ವಕಾಲತ್‌ನಾಮ ಕುರಿತ ಮತ್ತೊಂದು ಮಹತ್ವದ ತೀರ್ಪು. ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ನ್ಯಾಯಪೀಠ ವಕಾಲತ್‌ನಾಮದ ಮಹತ್ವವನ್ನು ಹೇಳಿದೆ. ಅದು ಕಕ್ಷಿದಾರರು ವಕೀಲರಿಗೆ ನೀಡುವ ಸಂಪೂರ್ಣ ಅಧಿಕಾರ. ಪ್ರಕರಣ ಹಿಂಪಡೆಯಲು ವಕೀಲರು ನ್ಯಾಯಾಲಯಕ್ಕೆ ಸಲ್ಲಿಸುವ ಮೆಮೋ ಮೇಲೆ ಕಕ್ಷಿದಾರರ ಸಹಿ ಅಗತ್ಯವಿಲ್ಲ" ಎಂಬುದನ್ನು "ಅಶ್ವಥ್ ಕುಮಾರ್ Vs ಕರ್ನಾಟಕ ರಾಜ್ಯ" ಪ್ರಕರಣದ ತೀರ್ಪು ಹೇಳಿದೆ.
ಕಕ್ಷಿದಾರರ ಪರವಾಗಿ ಕ್ರಮ ಕೈಗೊಳ್ಳಲು ವಕೀಲರಿಗೆ ವಕಾಲತ್ ಪ್ರಕಾರ ಸಂಪೂರ್ಣ ಅಧಿಕಾರ ಇರುತ್ತದೆ. ಹಾಗಾಗಿ, ಪ್ರಕರಣವನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಸಲ್ಲಿಸಲಾಗುವ ಮೆಮೋ (ಜ್ಞಾಪಕ ಪತ್ರ)ಕ್ಕೆ ಪಕ್ಷಗಾರರ ಸಹಿ ಪಡೆಯುವ ಅಗತ್ಯವಿರುವುದಿಲ್ಲ ಎಂದಿರುವ ತೀರ್ಪು, ಆದರೂ ಲಿಖಿತ ಸೂಚನೆ ವಿವೇಚನಾಯುಕ್ತ ನಡೆ ಎಂದು ಹೇಳಿದೆ.
ಅದೇ ರೀತಿ, ನ್ಯಾಯಮಂಡಳಿಯಲ್ಲಿ ಪಕ್ಷಕಾರರ ಪರವಾಗಿ ವಕಾಲತ್‌ನಾಮಾ ಹಾಕುವುದು ಮತ್ತು ಅವರ ಪರವಾಗಿ ವಾದಿಸುವುದು ವಕೀಲರ ಹಕ್ಕು. ಅದನ್ನು ಜಿಲ್ಲಾಧಿಕಾರಿಯಾಗಲೀ, ಸಕ್ಷಮ ಪ್ರಾಧಿಕಾರವಾಗಲೀ ನಿರಾಕರಿಸುವಂತಿಲ್ಲ. ಇದನ್ನು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದ್ದು, ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ 2007ರ ಸೆಕ್ಷನ್ 17ರ ಅನ್ವಯ ನ್ಯಾಯಮಂಡಳಿಯಲ್ಲಿ ವಕೀಲರು ಪ್ರತಿನಿಧಿಸುವಂತಿಲ್ಲ ಎಂಬ ಕಾನೂನು ಅಸಂವಿಧಾನಿಕ ಎಂದು "ಕೆ.ಶ್ರೀನಿವಾಸ್ ಗಾಣಿಗ Vs ಭಾರತ ಸರ್ಕಾರ" ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ.
ಟ್ರಿಬ್ಯೂನಲ್ ಯಾ ಸಕ್ಷಮ ಪ್ರಾಧಿಕಾರದ ಮುಂದೆ ಏನೆಲ್ಲ ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ಪಕ್ಷಕಾರರಿಗೆ ಗೊತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ವಕೀಲರ ನೆರವು ಅಗತ್ಯವಿರುತ್ತದೆ. ಸಂವಿಧಾನದ 21ನೇ ವಿಧಿಯಡಿ ದೊರೆತ ಹಕ್ಕಿನ ಭಾಗವಾಗಿ ಕಾನೂನು ನೆರವು ಪಡೆಯುವ ಹಕ್ಕು ಇರುತ್ತದೆ. ಇದನ್ನು ಮೊಟಕು ಮಾಡಲಾಗದು ಎಂದು ಈ ತೀರ್ಪು ಹೇಳುತ್ತದೆ.
ಹಾಗೆಯೇ, ವಕೀಲರ ಸಂಘಗಳು ಆರೋಪಿಗಳ ಪರ ವಾದಿಸದಂತೆ ವಕೀಲರನ್ನು ನಿರ್ಬಂಧಿಸುವ ನಿರ್ಣಯಗಳನ್ನು ಅಂಗೀಕರಿಸುವುದು ನ್ಯಾಯಾಲಯದ ನಿಂದನೆಯಾಗುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠ ಹೇಳಿದ್ದು, ಪಕ್ಷಕಾರರು ಮತ್ತು ವಕೀಲರ ಸ್ವಾತಂತ್ರ್ಯದ ಬಗ್ಗೆ ವಿವರಿಸಿದೆ.
ಜಿಲ್ಲಾ ಕಾನೂನು ನೆರವು ಸೇವಾ ಪ್ರಾಧಿಕಾರದಿಂದ ಕಾನೂನು ನೆರವು ರಕ್ಷಣಾ ಸಲಹೆಗಾರರಾಗಿ ನೇಮಕಗೊಂಡಿದ್ದ ಮೂವರು ವಕೀಲರ ಪರವಾನಿಗೆಯನ್ನು ಅಮಾನತುಗೊಳಿಸಿದ ಭರತ್‌ಪುರ ವಕೀಲರ ಸಂಘದ ಕ್ರಮಕ್ಕೆ ಸಂಬಂಧಿಸಿದ ತೀರ್ಪು ಇದಾಗಿತ್ತು.
ಅದೇ ರೀತಿ, ಕೆಲವೊಮ್ಮೆ ಪಕ್ಷಕಾರರು ವಕೀಲರಿಗೆ ಅವರ ಶುಲ್ಕ/ಫೀಸ್ ಕೊಡುವುದರಲ್ಲಿ ಭಾರೀ ಹಿಂದೆ ಮುಂದೆ ನೋಡುತ್ತಾರೆ. ಪ್ರಕರಣದ ತೀರ್ಪು ಬಂದ ಮೇಲೆ ಕಕ್ಷಿದಾರರು ವಕೀಲರ ಕೈಗೆ ಸಿಗುವುದಿಲ್ಲ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ "ಕೆ.ಎಸ್. ಮಹಾದೇವನ್ Vs ಸಿಪ್ರಿಯಾನ್ ಮೆನೆಜಸ್ ಮತ್ತೊಬ್ಬರು" ಪ್ರಕರಣದಲ್ಲಿ ತೀರ್ಪು ನೀಡಿ ವಕೀಲರಿಗೆ ರಿಲೀಫ್ ನೀಡಿತು. ವಕೀಲರ ವೃತ್ತಿ ಶುಲ್ಕಕ್ಕೂ ಕೋರ್ಟ್ ಆದೇಶಕ್ಕೂ ಯಾವುದೇ ಸಂಬಂಧವಿಲ್ಲ; ಕೇಸು ಗುಣವಾಗದಿದ್ದರೆ ಅದು ವಕೀಲರ ನಂಬಿಕೆ ದ್ರೋಹವಲ್ಲ ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸಿತು. ಯಾವುದೇ ಪ್ರಕರಣದಲ್ಲಿ ವಕೀಲರು ನಿಶ್ಚಿತವಾಗಿ ಪಕ್ಷಕಾರರ ಪರವಾಗಿ ನ್ಯಾಯಪೀಠದಿಂದ ಪೂರಕವಾದ ಆದೇಶವನ್ನೇ ಪಡೆಯುತ್ತಾರೆ ಎಂಬುದು ನಂಬಲಾಗದ ವಿಚಾರ. ಪ್ರಕರಣದ ವಾಸ್ತವಾಂಶ ಹಾಗೂ ಕಾನೂನು ಇಲ್ಲಿ ಪ್ರಮುಖ ಅಂಶಗಳಾಗಿರುತ್ತವೆ. ಕಕ್ಷಿದಾರರು ವಕೀಲರಿಗೆ ಪಾವತಿಸುವ ಶುಲ್ಕಕ್ಕೂ ನ್ಯಾಯಾಲಯದ ಆದೇಶಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಈ ತೀರ್ಪು ವಿಷದಪಡಿಸಿತು.
ನ್ಯಾಯಾಲಯಗಳಲ್ಲಿ ಬೇರೆ ರಾಜ್ಯದ ವಕೀಲರು ಕಕ್ಷಿದಾರರನ್ನು ಪ್ರತಿನಿಧಿಸಬಹುದೇ ಎಂಬ ಪ್ರಶ್ನೆಯೂ ಸಹಜವಾಗಿಯೇ ಏಳುತ್ತದೆ. ಮಹಾರಾಷ್ಟ್ರದಲ್ಲಿ ಅಲ್ಲಿನ ಹೈಕೋರ್ಟ್ ಈ ಅಂಶವನ್ನು ಇತ್ಯರ್ಥಪಡಿಸಿದೆ. ಇತರ ರಾಜ್ಯಗಳಲ್ಲಿ ನೋಂದಣಿಯಾಧ ವಕೀಲರು ಮಹಾರಾಷ್ಟ್ರದಲ್ಲಿ ನೋಂದಣಿಯಾದ ವಕೀಲರ ಸಹಿ ಇಲ್ಲದೆ ಮಹಾರಾಷ್ಟ್ರ ರಾಜ್ಯದಲ್ಲಿ ವಕಾಲತ್ತು ಹಾಕುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. (ಮೊಯಿನೊದ್ದೀನ್ ಗೋಲ್ಡರ್ Vs ಮಹಾರಾಷ್ಟ್ರ ಸರ್ಕಾರ, Dated 15-03-2024).
ಇನ್ನು ವಕೀಲರಾಗಿ ನೋಂದಣಿಯಾಗದ ಕಾನೂನು ಪದವೀಧರರೂ ಕೋರ್ಟ್‌ನಲ್ಲಿ ವಾದ ಮಂಡಿಸುವಂತಿಲ್ಲ, ವಕಾಲತ್‌ನಾಮಾಕ್ಕೆ ಸಹಿ ಹಾಕುವಂತಿಲ್ಲ. 2010ರ ಜುಲೈ ಹಾಗೂ ನಂತರದಲ್ಲಿ ಕಾನೂನು ಪದವಿ ಪಡೆದವರು ಎರಡು ವರ್ಷಗಳ ತನಕ ಕೋಟು ಧರಿಸಿ ನ್ಯಾಯಾಲಯಕ್ಕೆ ಬರಬಹುದು. ಆದರೆ, ವಕಾಲತ್ತಿಗೆ ಸಹಿ ಹಾಕುವಂತಿಲ್ಲ. ವಕೀಲರ ಡ್ರೆಸ್(ಧಿರಸು)ನಲ್ಲಿ ವಕೀಲಿಕೆ ನಡೆಸಲು ಅವಕಾಶ ಇಲ್ಲ. ಅವರು AIBE ಪರೀಕ್ಷೆ ಪಾಸ್ ಆಗದೇ ವಕಾಲತ್ತಿಗೆ ಸಹಿ ಹಾಕಿದ್ರೆ ವಕೀಲರ ಸನದು ರದ್ದುಗೊಳ್ಳುವ ಸಾಧ್ಯತೆ ಇದೆ.
ಕಕ್ಷಿದಾರರು ವಕೀಲರಿಗೆ ವಕಾಲತ್‌ನಾಮ ಕೊಟ್ಟ ಮೇಲೆ ಕೇಸಿನಲ್ಲಿ ತಮ್ಮ ಜವಾಬ್ದಾರಿ ಮುಗಿಯಿತು, ಇನ್ನು ಮುಂದೆ ವಕೀಲರೇ ಎಲ್ಲ ನೋಡಿಕೊಳ್ಳುತ್ತಾರೆ ಎಂದು ಭಾವಿಸುವಂತಿಲ್ಲ. ತಮ್ಮ ಕೇಸನ್ನು ಸರಿಯಾಗಿ ನಡೆಸಿಕೊಡುವಂತೆ ಮಾಹಿತಿ ನೀಡುವುದು, ವಕೀಲರಿಂದ ಕೇಸಿನ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಪಡೆಯುವುದು ಕಕ್ಷಿದಾರರ ಕರ್ತವ್ಯ ಕೂಡ. ಕೇಸಿನ ವಾಯಿದೆಗೆ ಹಾಜರಾಗದಿದ್ದರೆ ಅದಕ್ಕೆ ವಕೀಲರನ್ನು ಜವಾಬ್ದಾರರನ್ನಾಗಿ ಮಾಡಲಾಗದು.
ಯಾವುದೇ ಪ್ರಕರಣದಲ್ಲಿ ಪಕ್ಷಕಾರರು ಹಾಜರಾದೇ ಇದ್ದರೆ ಅದಕ್ಕೆ ಕೇಸು ನಡೆಸುವ ವಕೀಲರನ್ನು ಹೊಣೆಗಾರರನ್ನಾಗಿ ಮಾಡಲಾಗದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೇಸಿನ ವಾಯಿದೆ ಮತ್ತು ಅದರ ವಿಚಾರಣಾ ಹಂತದ ಬಗ್ಗೆ ಪಕ್ಷಕಾರರು ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು. ಮತ್ತು ಇದು ಅವರು ಜವಾಬ್ದಾರಿಯಾಗಿದೆ ಎಂದು "ಎನ್. ಸೆಂಗೊಟ್ಟೈನ್ Vs ಷಣ್ಮುಘವಡಿವು" ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಇದೇ ವೇಳೆ, ಕಕ್ಷಿದಾರರು ಪ್ರಕರಣದ ಬಗ್ಗೆ ವಕೀಲರನ್ನು ದೂರುವುದು ಸಹಜ. ಈ ಬಗ್ಗೆ ವಕೀಲರ ವಿರುದ್ಧ ದೂರು ದಾಖಲಿಸಿದ ಪ್ರಕರಣವೊಂದರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕಕ್ಷಿದಾರರಿಗೆ ದಂಡ ವಿಧಿಸಿ ತೀರ್ಪು ನೀಡಿದೆ.
ಇದೆಲ್ಲವೂ ವಕೀಲರಿಗೆ ಕಕ್ಷಿದಾರರು ನೀಡುವ ವಕಾಲತ್ತುನಾಮೆಯ ಮಹತ್ವವನ್ನು ಎತ್ತಿತೋರಿಸುತ್ತದೆ. ಕಾನೂನು ಪ್ರಕ್ರಿಯೆಯಲ್ಲಿ ಪಕ್ಷಕಾರರ ಪರವಾಗಿ ಸಮರ್ಥವಾದ ಸೂಕ್ತವಾದ ಮತ್ತು ಸಮಂಜಸವಾದ ವಾದ ಮಂಡಿಸುವ ಮೂಲಕ ವಕೀಲರು ವಾದ ಮಂಡಿಸುವುದಕ್ಕೆ ವಕಾಲತ್ತುನಾಮೆ ಸಂಪೂರ್ಣ ಅಧಿಕಾರ ನೀಡುತ್ತದೆ.