ಕೇಸ್ ಕರೆದಾಗ ಕೋರ್ಟ್ ಆವರಣದಲ್ಲಿ ಮದ್ಯದ ಬಾಟಲಿ ಹಿಡಿದಿದ್ದ ಆರೋಪಿ: ಜಾಮೀನು ರದ್ದು ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಕೇಸ್ ಕರೆದಾಗ ಕೋರ್ಟ್ ಆವರಣದಲ್ಲಿ ಮದ್ಯದ ಬಾಟಲಿ ಹಿಡಿದಿದ್ದ ಆರೋಪಿ: ಜಾಮೀನು ರದ್ದುಪಡಿಸಿದ ಕೋರ್ಟ್ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಕೋರ್ಟ್‌ನಲ್ಲಿ ತನ್ನ ವಿರುದ್ಧದ ಕೇಸ್ ವಿಚಾರಣೆ ನಡೆಯುತ್ತಿದ್ದಾಗ, ವಿಚಾರಣೆಗೆ ಹಾಜರಾಗದೆ ಕೋರ್ಟ್ ಆವರಣದಲ್ಲಿ ಮದ್ಯದ ಬಾಟಲಿ ಹಿಡಿದಿದ್ದ ಆರೋಪಿಯ ಜಾಮೀನು ರದ್ದುಪಡಿಸಿದ ವಿಚಾರಣಾ ಕೋರ್ಟ್ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಕರ್ನಾಟಕ ಹೈಕೋರ್ಟ್‌ನ ರಜಾ ಕಾಲೀನ ಏಕ ಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರು ಈ ಆದೇಶ ಹೊರಡಿಸಿದ್ದಾರೆ.
ಮೈಸೂರು ತಾಲ್ಲೂಕಿನ ಬೆಳವಾಡಿಯ ಶಿವಕುಮಾರ್ ಅಲಿಯಾಸ್ ಶಿವು ಅಲಿಯಾಸ್ ಆರ್‌ಎಕ್ಸ್ ಶಿವು ಎಂಬಾತ ಜೈಲು ಸೇರಿದ ಆರೋಪಿಯಾಗಿದ್ಧಾನೆ.
"ಜಾಮೀನು ರದ್ದು ಮಾಡುವ ಮೊದಲು ಕೋರ್ಟ್ ಕನಿಷ್ಟ ಆರೋಪಿಗೆ ನೋಟಿಸ್ ಜಾರಿ ಮಾಡಿ ಒಂದು ಅವಕಾಶ ನೀಡಬೇಕಿತ್ತು. ಅಥವಾ ಕಾನೂನಿನ ಪ್ರಕಾರ ಬೇರೆ ಪ್ರಕರಣ ದಾಖಲಿಸಬಹುದಿತ್ತು. ಆರೋಪಿಯು ಕೃಷಿಕರಾಗಿದ್ದು, ಆರೋಪಿಯು ಒಂದು ತಿಂಗಳಿಂದ ಕಸ್ಟಡಿಯಲ್ಲಿದ್ದಾರೆ. ಪೊಲೀಸರ ಹೇಳಿಕೆಯ ಮೇಲೆ ಬಂಧಿಸಲಾಗಿದೆ” ಎಂದು ಆರೋಪಿ ಪರ ವಕೀಲರು ವಾದಿಸಿದರು.
ಇದಕ್ಕೆ ಕೆಂಡಾಮಂಡಲವಾದ ನ್ಯಾಯಪೀಠ, "ಕೋರ್ಟ್ ಕೇಸು ಕರೆಯುತ್ತಿದ್ಧಾಗ, ನೀವು ನ್ಯಾಯಾಲಯದಲ್ಲಿ ಮದ್ಯದ ಬಾಟಲಿ ಹಿಡಿದಿದ್ದಿರಿ. ಈ ಘಟನೆಯನ್ನು ವಿಚಾರಣಾಧೀನ ನ್ಯಾಯಾಧೀಶರು ಸಿಸಿಟಿವಿ ವೀಡಿಯೋದಲ್ಲಿ ನೋಡಿದ್ದಾರೆ. ಕೇಸ್ ಕರೆದಾಗ ಕೋರ್ಟ್ ಮುಂದೆ ಹಾಜರಾಗಿಲ್ಲ. ಮುಂದಿನ ವಿಚಾರಣೆಯಂದೂ ನೀವು ವಿಚಾರಣೆಗೆ ಗೈರಾಗಿದ್ದೀರಿ. ಕುಡಿಯೋಕೆ ಬಾಟಲಿ ಎತ್ಕೊಂಡು ಕೋರ್ಟ್‌ಗೆ ಹೋಗುವುದಕ್ಕೆ ಆಗುತ್ತೆ, ಕೇಸ್ ಕರೆದಾಗ ಪೀಠದ ಮುಂದೆ ಹಾಜರಾಗಲಾಗುವುದಿಲ್ಲ ಎಂದರೆ ಜಾಮೀನು ರದ್ದುಪಡಿಸದೇ ವಿಚಾರಣಾಧೀನ ನ್ಯಾಯಾಲಯ ಏನು ಮಾಡುವುದಕ್ಕಾಗುತ್ತೆ?” ಎಂದು ಖಾರವಾಗಿ ನುಡಿಯಿತು.
"ಸಿಸಿಟಿವಿ ದೃಶ್ಯಾವಳಿಯಲ್ಲಿ ಅಲ್ಲಿ ಮದ್ಯ ಇತ್ತು ಎಂದು ಹೇಗೆ ಗೊತ್ತಾಗುತ್ತದೆ?” ಎಂಬ ವಕೀಲರ ಮಾತು ಕೋರ್ಟ್‌ನ್ನು ಮತ್ತಷ್ಟು ಕೆರಳಿಸಿತು. "ತನಿಖೆ ನಡೆಸಿ, ಸತ್ಯಾಂಶ ಸಾಬೀತಾದರೆ ವಿಚಾರಣೆಯ ಪೂರ್ತಿ ಸಮಯ ನಿಮ್ಮನ್ನು ಜೈಲಿನಲ್ಲಿ ಇಡಬಹುದೇ?" ಎಂದು ಸವಾಲೆಸೆಯಿತು.
"ಈ ವೀಡಿಯೋವನ್ನು ಸ್ವತಃ ನ್ಯಾಯಾಧೀಶರು ರೆಕಾರ್ಡ್ ಮಾಡಿದ್ದಾರೆ. ನೋಡಿ, ಈ ವೀಡಿಯೋದಲ್ಲಿ ಆರೋಪಿ ಮದ್ಯದ ಬಾಟಲಿಯ ಜೊತೆಗೆ ಇದ್ದಾನೆ." ಎಂದು ಖಾರವಾಗಿ ನುಡಿಯಿತು
"ಕೋರ್ಟ್‌ನಲ್ಲಿ ಆರೋಪಿ ಸರಿಯಾಗಿ ನಡೆದುಕೊಳ್ಳದೆ ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ಸ್ವಲ್ಪ ದಿನ ಜೈಲಿನಲ್ಲೇ ಇರಲಿ ಬಿಡಿ, ಅವರು ಸರಿ ಹೋಗುತ್ತಾರೆ. ನ್ಯಾಯಾಲಯದ ಅಧಿಕಾರಿಯಾಗಿ ಇದಕ್ಕೆ ನೀವು ಪ್ರೋತ್ಸಾಹ ನೀಡಬಾರದು. ಕಕ್ಷಿದಾರರನ್ನು ಸಮರ್ಥಿಸುವುದು ನಿಮ್ಮ ವೃತ್ತಿ. ಆದರೆ, ನ್ಯಾಯಾಲಯದ ಬಗ್ಗೆ ಕನಿಷ್ಟ ಗೌರವ ಇರಬೇಕು" ಎಂದು ನ್ಯಾಯಪೀಠ ತಾಕೀತು ಮಾಡಿತು.