-->
ಇಂಧನ ಮಿತವ್ಯಯ ಪ್ರಧಾನಿ ಮನವಿಗೆ ಸುಪ್ರೀಂ ಕೋರ್ಟ್ ಸ್ಪಂದನೆ: ಕಾರ್‌ ಪೂಲಿಂಗ್, ವಾರದಲ್ಲಿ 2 ದಿನ ಸಂಪೂರ್ಣ ವರ್ಚುವಲ್ ವಿಚಾರಣೆ

ಇಂಧನ ಮಿತವ್ಯಯ ಪ್ರಧಾನಿ ಮನವಿಗೆ ಸುಪ್ರೀಂ ಕೋರ್ಟ್ ಸ್ಪಂದನೆ: ಕಾರ್‌ ಪೂಲಿಂಗ್, ವಾರದಲ್ಲಿ 2 ದಿನ ಸಂಪೂರ್ಣ ವರ್ಚುವಲ್ ವಿಚಾರಣೆ

ಇಂಧನ ಮಿತವ್ಯಯ ಪ್ರಧಾನಿ ಮನವಿಗೆ ಸುಪ್ರೀಂ ಕೋರ್ಟ್ ಸ್ಪಂದನೆ: ಕಾರ್‌ ಪೂಲಿಂಗ್, ವಾರದಲ್ಲಿ 2 ದಿನ ಸಂಪೂರ್ಣ ವರ್ಚುವಲ್ ವಿಚಾರಣೆ





ಇಂಧನ ಉಳಿತಾಯಕ್ಕಾಗಿ ಪ್ರಧಾನಿ ಮೋದಿಯವರ ಮನವಿಯ ಹಿನ್ನೆಲೆಯಲ್ಲಿ ವಾರದಲ್ಲಿ ಎರಡು ದಿನ ಸಂಪೂರ್ಣ ವರ್ಚುವಲ್ ವಿಧಾನಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಇನ್ನುಮುಂದೆ ಸೋಮವಾರ ಮತ್ತು ಶುಕ್ರವಾರ ಸಂಪೂರ್ಣ ವರ್ಚುವಲ್ ವಿಧಾನದಲ್ಲಿ ಕಾರ್ಯನಿರ್ವಹಿಸಲಿದ್ದು, ಉಳಿದ ಕೆಲಸದ ದಿನಗಳಲ್ಲಿ ಹೈಬ್ರಿಡ್ ವಿಧಾನ ಮುಂದುವರಿಯಲಿದೆ.


ಪಶ್ಚಿಮ ಏಷ್ಯಾ ಸಂಕಷ್ಟದಿಂದ ಉಂಟಾದ ಆರ್ಥಿಕ ಪರಿಣಾಮಗಳ ಹಿನ್ನೆಲೆ ಇಂಧನ ಉಳಿತಾಯ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಸುಪ್ರೀಂ ಕೋರ್ಟ್ ಸೋಮವಾರ ಮತ್ತು ಶುಕ್ರವಾರ ದಿನಗಳಲ್ಲಿ ಸಂಪೂರ್ಣವಾಗಿ ವೀಡಿಯೊ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗಳನ್ನು ನಡೆಸಲು ತೀರ್ಮಾನಿಸಿದೆ.


ಇದೇ ವೇಳೆ, ಪ್ರತಿ ವಾರ ಮಂಗಳವಾರದಿಂದ ಗುರುವಾರದವರೆಗೆ ಪ್ರಕರಣಗಳ ವಿಚಾರಣೆಯನ್ನು ಹೈಬ್ರಿಡ್ ವಿಧಾನದಲ್ಲಿ ನಡೆಸಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.


ತಿದ್ದುಪಡಿ ಮಾಡಿದ ಹೊಸ ವ್ಯವಸ್ಥೆಯ ಪ್ರಕಾರ, ಸೋಮವಾರ ಮತ್ತು ಶುಕ್ರವಾರದ ಎಲ್ಲಾ ವಿಚಾರಣೆಗಳು ಕೇವಲ ಆನ್‌ಲೈನ್ ಮೂಲಕವೇ ನಡೆಯಲಿವೆ. ಮಂಗಳವಾರ, ಬುಧವಾರ ಮತ್ತು ಗುರುವಾರ ದಿನಗಳಲ್ಲಿ ವಕೀಲರು ಮತ್ತು ವಾದಿಗಳು ಭೌತಿಕವಾಗಿ ಅಥವಾ ವರ್ಚುವಲ್ ಮೂಲಕ ಹಾಜರಾಗುವ ಆಯ್ಕೆಯನ್ನು ಹೊಂದಿರುತ್ತಾರೆ.


ಇಂಧನದ ಸಮರ್ಪಕ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ನ್ಯಾಯಮೂರ್ತಿಗಳೇ ಪರಸ್ಪರ ಕಾರ್-ಪೂಲಿಂಗ್ ವ್ಯವಸ್ಥೆಯನ್ನು ಅನುಸರಿಸಲು "ಏಕಮತದಿಂದ ನಿರ್ಧರಿಸಿದ್ದಾರೆ" ಎಂದು ಕೋರ್ಟ್ ತಿಳಿಸಿದೆ.


ಪ್ರತಿ ರಿಜಿಸ್ಟ್ರಿ ಶಾಖೆ ಅಥವಾ ವಿಭಾಗದ ಶೇ.50 ರಷ್ಟು ಸಿಬ್ಬಂದಿಗೆ ವಾರದಲ್ಲಿ ಗರಿಷ್ಠ ಎರಡು ದಿನಗಳವರೆಗೆ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಲಾಗಿದೆ. ಇದಕ್ಕಾಗಿ ವಾರವಾರದ ರೋಸ್ಟರ್ ಸಿದ್ಧಪಡಿಸುವುದರ ಜೊತೆಗೆ, ಕೋರ್ಟ್‌ನ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ.


ಯಾವುದೇ ನಿರ್ದಿಷ್ಟ ಶಾಖೆಯಲ್ಲಿ ಕೆಲಸದ ಸ್ವಭಾವದ ಕಾರಣ ಭೌತಿಕ ಹಾಜರಾತಿ ಅಗತ್ಯವಿದ್ದಲ್ಲಿ, ಸಂಬಂಧಿತ ರಿಜಿಸ್ಟ್ರಿ ಅಧಿಕಾರಿಗಳು ವರ್ಕ್-ಫ್ರಮ್-ಹೋಮ್ ವ್ಯವಸ್ಥೆಯನ್ನು ಮಿತಿಗೊಳಿಸಲು ಅಥವಾ ಬದಲಾಯಿಸಲು ಅಧಿಕಾರ ಹೊಂದಿರುತ್ತಾರೆ ಎಂದು ಕೂಡ ಕೋರ್ಟ್ ಹೇಳಿದೆ.


ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ನಾಗರಿಕರಿಗೆ ಮನವಿ ಮಾಡಿದ ಕೆಲವೇ ಸಮಯದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.


ಪ್ರಯಾಣ ಸಂಬಂಧಿತ ಇಂಧನ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಸೂಕ್ತ ಕ್ಷೇತ್ರಗಳಲ್ಲಿ ಮತ್ತೆ ವರ್ಕ್-ಫ್ರಮ್-ಹೋಮ್ ಪದ್ಧತಿಯನ್ನು ಉತ್ತೇಜಿಸಬಹುದೆಂದು ಪ್ರಧಾನಿಯವರು ಸೂಚಿಸಿದ್ದರು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu