ವಕೀಲರ ನ್ಯಾಯಾಂಗ ಬಂಧನ ಆದೇಶ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ ಕೋರ್ಟ್
ವಕೀಲರ ನ್ಯಾಯಾಂಗ ಬಂಧನ ಆದೇಶ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ ಕೋರ್ಟ್
ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ನಡೆದ ಕಿರಿಯ ವಕೀಲ ನ್ಯಾಯಾಂಗ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಹೈಕೋರ್ಟ್ ನ್ಯಾಯಾಧೀಶರು ತಮ್ಮ ಕೋರ್ಟ್ ಕಲಾಪದ ವಿಚಾರಣೆಯ ಸಂದರ್ಭದಲ್ಲಿ ಕಿರಿಯ ವಕೀಲರನ್ನು 24 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು. ನ್ಯಾಯಾಧೀಶರ ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
ಇದೇ ವೇಳೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ನ್ಯಾಯಾಂಗ ಶಿಸ್ತಿನ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.
ಘಟನೆಯ ವಿವರ:
ಕಳೆದ ಮೇ 4 ರಂದು ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ಟಿ. ರಾಜಶೇಖರ್ ರಾವ್ ಅವರ ಮುಂದೆ ಲುಕ್ ಔಟ್ ಸುತ್ತೋಲೆ ಮತ್ತು ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವುದನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಚಾರಣೆಯ ಸಮಯದಲ್ಲಿ, ಅರ್ಜಿದಾರರ ವಕೀಲರು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪನ್ನು ಹಾಜರುಪಡಿಸುವಂತೆ ಕೇಳಿದ ನಂತರ ಟೇಬಲ್ ಮೇಲೆ ಫೈಲ್ ಎಸೆದ ವಕೀಲರ ಅನುಚಿತ ನಡವಳಿಕೆ ಬಗ್ಗೆ ನ್ಯಾಯಾಧೀಶರು ಆಕ್ಷೇಪಿಸಿದರು.
ನಂತರ ಸಾರ್ವಜನಿಕ ವಲಯದಲ್ಲಿ ಪ್ರಸಾರವಾದ ವೀಡಿಯೊ ವಿಚಾರಣೆಯ ಪ್ರಕಾರ, ನ್ಯಾಯಮೂರ್ತಿ ರಾವ್ ವಕೀಲರನ್ನು ಮೌಖಿಕವಾಗಿ ಖಂಡಿಸಿ ಪೊಲೀಸರನ್ನು ಕರೆಯುವಂತೆ ನಿರ್ದೇಶಿಸುತ್ತಿರುವುದು ಕಂಡುಬಂದಿದೆ.
"ಅರ್ಜಿದಾರರ ಪರ ವಕೀಲರು ಪೀಠದ ಮುಂದೆ ನಿರ್ಲಕ್ಷ್ಯದ ವರ್ತನೆ ತೋರಿದ್ದಾರೆ" ಎಂದು ಹೈಕೋರ್ಟ್ ಆದೇಶದಲ್ಲಿ ದಾಖಲಿಸಲಾಗಿದೆ ಮತ್ತು ವಕೀಲರನ್ನು 24 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಂತೆ ನಿರ್ದೇಶಿಸಲಾಗಿದೆ. ವಕೀಲರ ಸಂಘದ ಪದಾಧಿಕಾರಿಗಳು ಮಧ್ಯಪ್ರವೇಶಿಸಿದ ಬಳಿಕ ವಿವಾದಿತ ಆದೇಶವನ್ನು ಹಿಂಪಡೆಯಲಾಗಿತ್ತು.
ಆದರೆ, ಈ ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಘಟನೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಮಧ್ಯಪ್ರವೇಶಿಸಿ ಘಟನೆಯ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿತ್ತು.
ನ್ಯಾಯಾಂಗದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಿಕೊಳ್ಳಲು ಮತ್ತು ಬಾರ್-ಬೆಂಚ್ ಸಂಬಂಧವನ್ನು ಸೌಹಾರ್ದಯುತವಾಗಿ ಕಾಪಾಡಿಕೊಳ್ಳಲು ಮತ್ತು ಆಡಳಿತಾತ್ಮಕ ಕ್ರಮಗಳ ಜೊತೆಗೆ ಈ ವಿಷಯದ ಬಗ್ಗೆ "ಸೂಕ್ತ ಸಾಂಸ್ಥಿಕ ಅರಿವು" ಮೂಡಿಸಲು ಬಾರ್ ಅಸೋಸಿಯೇಶನ್ ಮನವಿ ಮಾಡಿತ್ತು.
ಇಂತಹ ಘಟನೆಗಳು ಯುವ ವಕೀಲರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಪೀಠ ಮತ್ತು ವಕೀಲರ ನಡುವಿನ ಸಾಂಸ್ಥಿಕ ಸಮತೋಲನವನ್ನು ತೊಂದರೆಗೊಳಿಸಬಹುದು ಎಂದು ಕೌನ್ಸಿಲ್ ಎಚ್ಚರಿಸಿದೆ. "ಯುವ ವಕೀಲರು ಕೋರ್ಟ್ ಕಲಾಪದಲ್ಲಿ ನ್ಯಾಯಾಧೀಶರ ಮುಂದೆ ಪದೇ ಪದೇ ವಿನಂತಿ ಮಾಡಿದರೂ ಕಸ್ಟಡಿಗೆ ಕಳುಹಿಸುವ ಆದೇಶದಿಂದ ನ್ಯಾಯಾಲಯದ ಘನತೆ ಹೆಚ್ಚಾಗುವುದಿಲ್ಲ, ಬದಲಿಗೆ ಕೆಟ್ಟ ಪದ್ಧತಿಗೆ ನಾಂದಿ ಹಾಡುತ್ತದೆ" ಎಂದು ಸಿಜೆಐಗೆ ಬರೆದ ಪತ್ರದಲ್ಲಿ ಬಿಸಿಐ ತಿಳಿಸಿದೆ.
ತನ್ನ ಸಂವಹನದಲ್ಲಿ, ಬಿಸಿಐ ಸಿಜೆಐ ಅವರನ್ನು ತಕ್ಷಣವೇ ಸಮಸ್ಯೆಯನ್ನು ಅರಿತುಕೊಳ್ಳುವಂತೆ,
ಪ್ರಕರಣದ ವಿಚಾರಣೆಯ ವೀಡಿಯೊ ರೆಕಾರ್ಡಿಂಗ್‌ಗೆ ತರಿಸಿ ಆಗಿನ ಸಂದರ್ಭವನ್ನು ಪರಿಶೀಲಿಸುವಂತೆ ಸಿಜೆಐಗೆ ಮನವಿ ಮಾಡಲಾಗಿದೆ. ಪರಿಶೀಲನೆ ಬಾಕಿ ಇರುವ ನ್ಯಾಯಾಂಗ ಕೆಲಸವನ್ನು ಹಿಂತೆಗೆದುಕೊಳ್ಳುವುದು, ನ್ಯಾಯಾಧೀಶರನ್ನು ಮತ್ತೊಂದು ಹೈಕೋರ್ಟ್‌ಗೆ ವರ್ಗಾಯಿಸುವುದು ಮತ್ತು ನ್ಯಾಯಾಲಯದಲ್ಲಿ ಸೂಕ್ತ ನ್ಯಾಯಾಂಗ ತರಬೇತಿ ಸೇರಿದಂತೆ ಆಡಳಿತಾತ್ಮಕ ಕ್ರಮಗಳನ್ನು ಪರಿಗಣಿಸಬೇಕೆಂದು ಅದು ಪತ್ರದಲ್ಲಿ ಸೂಚಿಸಿದೆ.