-->
LAW POINT 44: ಶಾಸನಬದ್ಧ ಸಂಸ್ಥೆಗಳ ಬೇಜವಾಬ್ದಾರಿ; ಕೋರ್ಟ್ ಛೀಮಾರಿ ಎಲ್ಲದಕ್ಕೂ ಪರಿಹಾರವೇ?

LAW POINT 44: ಶಾಸನಬದ್ಧ ಸಂಸ್ಥೆಗಳ ಬೇಜವಾಬ್ದಾರಿ; ಕೋರ್ಟ್ ಛೀಮಾರಿ ಎಲ್ಲದಕ್ಕೂ ಪರಿಹಾರವೇ?

LAW POINT 44: ಶಾಸನಬದ್ಧ ಸಂಸ್ಥೆಗಳ ಬೇಜವಾಬ್ದಾರಿ; ಕೋರ್ಟ್ ಛೀಮಾರಿ ಎಲ್ಲದಕ್ಕೂ ಪರಿಹಾರವೇ?





ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಮುಂತಾದ ಶಾಸನಬದ್ಧ ಸಂಸ್ಥೆಗಳ ದುರ್ಬಳಕೆ ಬಗ್ಗೆ ಕಳೆದ ಒಂದೂವರೆ ದಶಕದಿಂದ ಅಪಸ್ವರ ಕೇಳಿಬರುತ್ತಿದೆ. ಪ್ರಭುತ್ವದ ವಿರುದ್ಧ ಧ್ವನಿ ಎತ್ತಿದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ಷಿಪ್ರಗತಿಯಲ್ಲಿ ನಡೆದ ಐಟಿ ಅಥವಾ ಇಡಿ ದಾಳಿಗಳು ಇದಕ್ಕೆ ಪುಷ್ಟಿ ನೀಡುವಂತಿದೆ.

ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯಲ್ಲಿ ಟೀಕೆಗಳು, ಆರೋಪಗಳು, ಪ್ರತಿಭಟನೆಗಳು ಸಹಜ. ಇದು ಆರೋಗ್ಯಯುತ ಸಮಾಜದ ಪ್ರತೀಕ. ಆದರೆ, ಈ ಮಾತುಗಳನ್ನು ಮೌನವಾಗಿಸಲು ಅನುಸರಿಸುವ ಕಾರ್ಯತಂತ್ರ ಆತಂಕ ಹುಟ್ಟಿಸುತ್ತದೆ.

ಜಾರಿ ನಿರ್ದೇಶನಾಲಯ ಮತ್ತದರ ಬಂಧನದ ಅಧಿಕಾರ

ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯಿದೆ. (ಪಿಎಂಎಲ್‌ಎ) ಇದರ ಸೆಕ್ಷನ್ 19 ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ವ್ಯಕ್ತಿಯ ಬಂಧನದ ಅಧಿಕಾರ ನೀಡುತ್ತದೆ. ಆದರೆ, ಜಾರಿ ನಿರ್ದೇಶನಾಲಯವು ಶಂಕಿತ ವ್ಯಕ್ತಿಯೊಬ್ಬರು ಕಾನೂನಿನಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ನಂಬಲು ಸಕಾರಣದ ಆಧಾರ ಒದಗಿಸಬೇಕಾಗುತ್ತದೆ.

ಆದರೆ, ನಿರಂತರ ಪ್ರಕರಣಗಳ ಹಿನ್ನೆಲೆಯಲ್ಲಿ 2024ರ ಮೇಯಲ್ಲಿ ಜಾರಿ ನಿರ್ದೇಶನಾಲಯದ ಈ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿತ್ತು.

ಇಡಿ ಜಾರಿಗೊಳಿಸಿದ ನೋಟೀಸ್‌ ಮತ್ತು ಸಮನ್ಸ್‌ ಅಥವಾ ದೂರನ್ನು ಪರಿಗಣಿಸಿ ಆರೋಪಿಯು ವಿಶೇಷ ಕೋರ್ಟ್ ನಿರ್ದೇಶನದ ಮೇರೆಗೆ ಕೋರ್ಟ್ ಮುಂದೆ ಹಾಜರಾದಲ್ಲಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧನ ಮಾಡುವಂತಿಲ್ಲ. ಇಂತಹ ಸಂದರ್ಭದಲ್ಲಿ ಸಂಬಂಧಿತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿಯನ್ನು ಪಡೆದು ನಂತರ ಬಂಧಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ನ್ಯಾ. ಅಭಯ ಶ್ರೀನಿವಾಸ ಓಕಾ ಮತ್ತು ನ್ಯಾ. ಉಜ್ವಲ್ ಭುಯಾನ್ ಅವರಿದ್ದ ನ್ಯಾಯಪೀಠ ತೀರ್ಪು ನೀಡಿತ್ತು.

ಅಪರಾಧವನ್ನು ಪರಿಗಣಿಸಿದ ನಂತರ, ದೂರಿನಲ್ಲಿ ಆರೋಪಿ ಎಂದು ತೋರಿಸಲಾದ ವ್ಯಕ್ತಿಯನ್ನು ಬಂಧಿಸುವ ಅಧಿಕಾರ ಇ.ಡಿ. ಮತ್ತು ಅದರ ಅಧಿಕಾರಿಗಳಿಗೆ ಇರುವುದಿಲ್ಲ. ಸೆಕ್ಷನ್ 19ರನ್ವಯ ಅಂತಹ ಅಧಿಕಾರ ಚಲಾಯಿಸುವ ಅವಕಾಶವನ್ನು ಅವರು ಕಳೆದುಕೊಳ್ಳುತ್ತಾರೆ ಎಂದು ನ್ಯಾಯಪೀಠ ಹೇಳಿದೆ. ಆದರೂ, ಕಸ್ಟಡಿ ಕೋರಿ ಇ.ಡಿ. ಅರ್ಜಿ ಸಲ್ಲಿಸಿದರೆ, ಆಗ ಆರೋಪಿಯ ವಿಚಾರಣೆ ನಡೆಸಿ ವಿಶೇಷ ನ್ಯಾಯಾಲಯವು ಸಂಕ್ಷಿಪ್ತ ಕಾರಣಗಳನ್ನು ದಾಖಲಿಸಿ ಇ.ಡಿ. ಅರ್ಜಿಯ ಮೇಲೆ ಸೂಕ್ತ ಆದೇಶ ಹೊರಡಿಸಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.

ಕಾಯಿದೆಯ ಸೆಕ್ಷನ್ 50ರ ಅಡಿಯಲ್ಲಿ ನೀಡಲಾದ ನೋಟೀಸ್/ಸಮನ್ಸ್‌ಗೆ ಪ್ರತಿಯಾಗಿ ವಿಚಾರಣೆ ನಡೆಸಲು ಆ ವ್ಯಕ್ತಿ ಸಹಕರಿಸಲು ಒಪ್ಪುತ್ತಿಲ್ಲ ಎಂದ ಮಾತ್ರಕ್ಕೆ ಆರೋಪಿಯನ್ನು ಕಾಯಿದೆಯ ಸೆಕ್ಷನ್ 19ರಡಿ ಬಂಧನಕ್ಕೆ ಅರ್ಹರಾಗುತ್ತಾರೆ ಎನ್ನುವುದಕ್ಕೆ ಕಾರಣವಾಗದು ಎಂದು ಕೋರ್ಟ್ ಹೇಳಿತ್ತು.

ಇನ್ನೊಂದು ಪ್ರಕರಣದಲ್ಲಿ ವಯೋವೃದ್ಧ ಉದ್ಯಮಿಯನ್ನು ರಾತ್ರಿ ಇಡೀ ವಿಚಾರಣೆ ನಡೆಸಿ ಮುಂಜಾನೆ ಬಂಧನ ತೋರಿಸಿದ ಜಾರಿ ನಿರ್ದೇಶನಾಲಯವು ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂಜಾನೆ 3 ಗಂಟೆಯ ವರೆಗೂ ವಿಚಾರಣೆ ನಡೆಸಿದ ಕ್ರಮವನ್ನು ಸುಪ್ರೀಂ ದ್ವಿಸದಸ್ಯ ನ್ಯಾಯಪೀಠ ಆಕ್ಷೇಪಿಸಿತ್ತು.

ಅದೇ ರೀತಿ, 2024ರ ಮೇನಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಈ ಪ್ರಕರಣವು ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಆದರೆ, ಜಾರಿ ನಿರ್ದೇಶನಾಲಯವು ಐಪಿಸಿ ಸೆಕ್ಷನ್ 120 ಬಿ ಪ್ರಕಾರ ಅಪರಾಧಿಕ ಒಳಸಂಚು ಆರೋಪ ಹೊರಿಸಿ ಈ ಪ್ರಕರಣವನ್ನು ದಾಖಲಿಸಿದೆ ಎಂಬ ಅರ್ಜಿದಾರರ ವಾದಕ್ಕೆ ಸುಪ್ರೀಂ ಮನ್ನಣೆ ನೀಡಿತ್ತು.

ರಾಜ್ಯದಲ್ಲಿ ನಡೆದಿದೆ ಎನ್ನಲಾದ ವಾಲ್ಮೀಕಿ ಹಗರಣದಲ್ಲಿ ಜಾರಿ ನಿರ್ದೇಶನಾಲಯವು ಇಲಾಖೆಯ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿತ್ತು. ತನಿಖೆಯ ನೆಪದಲ್ಲಿ ಇಡಿ ಅಧಿಕಾರಿಗಳು ಸಮಾಜ ಕಲ್ಯಾಣಗಳ ಮೇಲೆ ಒತ್ತಡ ಹಾಕಿ ಆಗಿನ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿತ್ತು

ತನಿಖಾಧಿಕಾರಿ ಸಾಕ್ಷಿಗೆ ಬೆದರಿಕೆ ಹಾಕುವಂತಿಲ್ಲ. ಇದು ಜಾರಿ ನಿರ್ದೇಶನಾಲಯ, ಸಿಬಿಐ ಅಥವಾ ಬೇರಾವುದೇ ತನಿಖಾ ಸಂಸ್ಥೆಯಾದರೂ ಸರಿಯೇ... ಬೆದರಿಕೆ ಹಾಕುವುದು ಕಾನೂನುಬಾಹಿರ ಎಂದು ಹೇಳಿ ಹೈಕೋರ್ಟ್‌ ಎಫ್‌ಐಆರ್‌ಗೆ ಬ್ರೇಕ್ ಹಾಕಿತ್ತು.

"ವಿಜಯ್ ಮದನ್ ಲಾಲ್ ಚೌಧರಿ ವಿರುದ್ಧ ಭಾರತ ಒಕ್ಕೂಟ ಪ್ರಕರಣ"ದಲ್ಲಿ (2025ರ ಆಗಸ್ಟ್‌) ಜಾರಿ ನಿರ್ದೇಶನಾಲಯವು ಅಧಿಕಾರ ದುರುಪಯೋಗ ಮಾಡಿದೆ ಎಂದು ಸುಪ್ರೀಂ ಕೋರ್ಟ್‌ ಆಕ್ರೋಶದ ನುಡಿಗಳನ್ನಾಡಿದ್ದು, 'ಇ.ಡಿ. ವಂಚಕನಂತೆ ವರ್ತಿಸಬಾರದು' ಎಂದು ಅಧಿಕಾರಿಗಳನ್ನು ಗದರಿಸಿತ್ತು.

ಸುಮಾರು 5000 ಪ್ರಕರಣಗಳಲ್ಲಿ ಶೇಕಡಾ 10ಕ್ಕಿಂತ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಆಗುತ್ತಿದೆ. ಜಾರಿ ನಿರ್ದೇಶನಾಲಯವು ಕಾನೂನು ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸಬೇಕು. ಕಾನೂನು ಭಂಜಕರು ಮತ್ತು ಜಾರಿ ಅಧಿಕಾರಿಗಳ ನಡುವೆ ವ್ಯತ್ಯಾಸವಿದೆ, ಅಧಿಕಾರಿಗಳು ವಂಚಕನಂತೆ ವರ್ತಿಸಬಾರದು ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿತ್ತು.

ಇದೆಲ್ಲವೂ ಜಾರಿ ನಿರ್ದೇಶನಾಲಯ ಮತ್ತು ಅದರ ತನಿಖಾ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ. ಇದಕ್ಕೆಲ್ಲ ಮುಕುಟವಿಟ್ಟಂತೆ "ನ್ಯೂಸ್‌ಕ್ಲಿಕ್" ಮಾಧ್ಯಮ ಸಂಸ್ಥೆಯ ವಿರುದ್ಧದ ಪ್ರಕರಣ ಎದ್ದುನಿಲ್ಲುತ್ತದೆ. ಈ ಸಂಸ್ಥೆಯ ವಿರುದ್ಧ ಸುಳ್ಳು ಆರೋಪ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯೇ ಆಗಿದೆ.

ನ್ಯೂಸ್ ಕ್ಲಿಕ್ ಸುದ್ದಿ ಮಾಧ್ಯಮದ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಈ ಸುದ್ದಿಮಾಧ್ಯಮಕ್ಕೆ ನಿರಂತರವಾಗಿ ನೀಡುತ್ತಿದ್ದ ಕಿರುಕುಳಕ್ಕೆ ಅಂತ್ಯವಾಡಿದೆ.

ಕೋವಿಡ್ ಸಂದರ್ಭದಲ್ಲಿ ಬಂಧನಕ್ಕೊಳಗಾದ ಆ ಸಂಸ್ಥೆಯ ಸಂಸ್ಥಾಪಕ ಹಾಗೂ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರನ್ನು ಸುಮಾರು 220 ದಿನಗಳ ಕಾಲ ಬಂಧನದಲ್ಲಿ ಇಟ್ಟ ಈ ಪ್ರಕರಣದಲ್ಲಿ ಹೊರಿಸಲಾದ ಆರೋಪಕ್ಕೆ ಇಡಿಯಲ್ಲಿ ಗಂಭೀರ ಸಾಕ್ಷ್ಯಗಳಿರಲಿಲ್ಲ.

ಅಪರಾಧ ನಡೆದಿದೆ ಎಂಬುದನ್ನು ಅಸ್ಪಷ್ಟವಾಗಿಯೂ ಹೇಳದ ಕೆಲವು 'ಮಾತುಗಳು ಮಾತ್ರ' ಎಂಬುದನ್ನು ಗಮನಿಸಿದ ಹೈಕೋರ್ಟ್, 'ಕಾನೂನಿನ ಪ್ರಕ್ರಿಯೆಯ ದುರ್ಬಳಕೆ ಆಗುತ್ತದೆ' ಎಂಬ ಮಾತುಗಳೊಂದಿಗೆ ಈ ಪ್ರಕರಣವನ್ನು ರದ್ದು ಮಾಡಿ ಆರು ವರ್ಷಗಳ ಕಿರುಕುಳವನ್ನು ಕೊನೆಗಾಣಿಸಿದೆ.

'ಪಿಎಂಎಲ್‌ಎ ಅಡಿಯಲ್ಲಿ ಶಿಕ್ಷೆಗೆ ಒಳಗಾಗಬಹುದಾದ ಅಪರಾಧ ನಡೆದಿದೆ ಎಂಬುದನ್ನು ಹೇಳುವ ಸಣ್ಣ ಆರೋಪವೂ ಕೂಡ ಇಲ್ಲ' ಎಂದು ದೆಹಲಿ ಹೈಕೋರ್ಟ್ ಹೇಳಿದೆ. ತನಿಖಾ ಸಂಸ್ಥೆಗಳು ಉಲ್ಲೇಖಿಸಿದ ಪ್ರತಿ ಆರೋಪವನ್ನೂ ವಿಶ್ಲೇಷಿಸಿರುವ ಕೋರ್ಟ್, ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸುವ ಯಾವುದೇ ಅಕ್ರಮ ಅಥವಾ ತಪ್ಪು ಕೆಲಸವು ನ್ಯೂಸ್‌ಕ್ಲಿಕ್‌ನಿಂದ ಆಗಿಲ್ಲ ಎಂದು ವಿವರಿಸಿದೆ.

ನ್ಯೂಸ್‌ಕ್ಲಿಕ್ ಸುದ್ದಿಮಾಧ್ಯಮದ ಕಚೇರಿಯ ಮೇಲೆ ದಾಳಿ ನಡೆಸಿ, ಅದರ ನೌಕರರನ್ನು ವಿಚಾರಣೆಗೆ ಒಳಪಡಿಸಿದ ಆರೋಪದ ನೈಜತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ದಾಳಿಯನ್ನು ಆಗ "ಎಡಿಟರ್ಸ್‌ ಗಿಲ್ಡ್' ಹಾಗೂ ವಿವಿಧ ಪತ್ರಕರ್ತರ ಸಂಘಟನೆಗಳು ಖಂಡಿಸಿದ್ದವು.

ರಾಜಕೀಯ ಒತ್ತಡಕ್ಕೆ ಮಣಿದು ಜಾರಿ ನಿರ್ದೇಶನಾಲಯ ದಾಖಲಿಸಿದ ಅನೇಕ ಪ್ರಕರಣಗಳು ಕಾಲ ಗರ್ಭದಲ್ಲಿ ಸುಳ್ಳು ಎಂದು ಸಾಬೀತಾಗಿದೆ. ಸುಳ್ಳನ್ನು ಸಾಬೀತುಮಾಡುವ ಕೆಲಸ ಬಹಳ ಶ್ರಮವನ್ನು ಕೇಳುತ್ತದೆ. ಆದರೆ, ಆ ಸುಳ್ಳನ್ನು 'ಸುಳ್ಳು' ಎಂದು ಸಾಬೀತುಮಾಡುವ ಪ್ರಕ್ರಿಯೆಯೇ ಒಂದು ದೊಡ್ಡ ಶಿಕ್ಷೆ ಆಗಿಬಿಡುತ್ತದೆ.

ನ್ಯೂಸ್ ಕ್ಲಿಕ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕೋರ್ಟ್‌ಗಳು ಹೇಳಿದಂತೆ, ಪ್ರಕರಣ ದಾಖಲಿಸುವಾಗ ಯಾವುದೇ ತಪ್ಪು ಆಗಿರಬೇಕು ಎಂಬುದೇನೂ ಇಲ್ಲ. ಆದರೆ, ಎಲ್ಲ ಸಂದರ್ಭಗಳಲ್ಲೂ ತಮ್ಮ ನಿರಪರಾಧಿತ್ವ ಸಾಬೀತು ಮಾಡುವ ಹೊಣೆಯು ಆರೋಪಿಯ ಮೇಲೆಯೇ ಬೀಳುತ್ತದೆ. ಈ ಹಂತದಲ್ಲಿ ಅನುಭವಿಸಿದ ಯಾತನೆ, ಜೈಲು ಶಿಕ್ಷೆಗಳು ಒಂದರ್ಥದಲ್ಲಿ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ. ಗುರುತರ ಹೊಣೆಗಾರಿಕೆ ಇರುವ ಸಂವಿಧಾನಿಕ ಸಂಸ್ಥೆಗಳ ಬೇಜವಾಬ್ದಾರಿ ನಡವಳಿಕೆ ಮತ್ತು ರಾಜಕೀಯ ಸೂತ್ರದಾರನ 'ದಾಳ'ವಾಗಿ ಬಳಕೆಯಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

 

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu