LAW POINT 45: ಫುಟ್‌ಪಾತ್‌ನಲ್ಲಿ ಸುರಕ್ಷಿತ ನಡಿಗೆ "ಮೂಲಭೂತ ಹಕ್ಕು": ಸುಪ್ರೀಂ ಐತಿಹಾಸಿಕ ತೀರ್ಪು
ಫುಟ್‌ಪಾತ್‌ನಲ್ಲಿ ಸುರಕ್ಷಿತ ನಡಿಗೆ "ಮೂಲಭೂತ ಹಕ್ಕು": ಸುಪ್ರೀಂ ಐತಿಹಾಸಿಕ ತೀರ್ಪು
ಫುಟ್‌ಪಾತ್‌ಗೆ ಮೀಸಲಿಟ್ಟ ಜಾಗದಲ್ಲಿ ನಡೆದಾಡುವುದು ಸಂವಿಧಾನಿಕ ಹಕ್ಕು. ರಸ್ತೆಯಲ್ಲಿ ಮೋಟಾರ್ ವಾಹನಗಳ ಸಂಚಾರಕ್ಕಿಂತಲೂ ಈ ಹಕ್ಕಿಗೆ ಆದ್ಯತೆ ನೀಡಬೇಕು. ಇದು 2026ರ ಜೂನ್ 19ರಂದು ನೀಡಿದ ಈ ತೀರ್ಪು ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪುಗಳಲ್ಲೊಂದು.
"ಮುನಿಯಾರ್ ಇಲ್ಯಾಸ್ ಆಲಿಯಾಸ್ ಶೇಕ್ ರಿಯಾಜ್ ವಿರುದ್ಧ ಪಿ. ಅಯ್ಯಪ್ಪನ್ ಮತ್ತಿತರರು" ಪ್ರಕರಣದಲ್ಲಿ (2026 INSC 647) ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅತುಲ್ ಎಸ್. ಚಂದೂರ್ಕರ್ ಅವರಿದ್ದ ವಿಭಾಗೀಯ ನ್ಯಾಯಪೀಠ ನೀಡಿದ ಮಹತ್ವದ ತೀರ್ಪು ಹಲವು ಆಯಾಮಗಳನ್ನು ಹೊಂದಿದೆ.
ರಸ್ತೆಗಳ ಇಕ್ಕೆಲ್ಲಗಳ ಪಾದಚಾರಿ ಮಾರ್ಗ ಮತ್ತು ರಸ್ತೆ ದಾಟುವ ಝೀಬ್ರಾ ಕ್ರಾಸಿಂಗ್ ಮತ್ತು ಅದರ ಮಹತ್ವದ ಬಗ್ಗೆ ಇಡೀ ದೇಶದ ಪೌರಾಡಳಿತಕ್ಕೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್‌ನ ಮೈಲುಗಲ್ಲಾದ ತೀರ್ಪಿದು.
2012ರಲ್ಲಿ "ಎಸ್. ರಾಜಸೀಕರನ್ ವಿರುದ್ಧ ಭಾರತ ಸರ್ಕಾರ" ಪ್ರಕರಣದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಪೌರಾಡಳಿತಗಳು ರಸ್ತೆಗಳನ್ನು ನಿರ್ಮಿಸುವಲ್ಲೇ ಮಗ್ನವಾಗಿವೆ. ಆದರೆ, ಆ ರಸ್ತೆಗಳ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು ಎಂದು ಏಕೆ ಯೋಚಿಸುತ್ತಿಲ್ಲ. ಪುಟ್‌ಪಾತ್‌ನಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು. 'ನಡೆಯುವ ಹಕ್ಕನ್ನು' ಆಧುನಿಕ ಸಮಾಜದಲ್ಲಿ ವ್ಯವಸ್ಥಿತವಾಗಿ ಕಿತ್ತುಕೊಳ್ಳಲಾಗಿದೆ ಎಂಬುದಾಗಿ ನ್ಯಾಯಪೀಠ ಗಂಭೀರವಾದ ಆತಂಕ ವ್ಯಕ್ತಪಡಿಸಿದೆ.
1988ರ ಮೋಟಾರು ವಾಹನಗಳ ಕಾಯ್ದೆಯಲ್ಲಿ ನಡೆಯುವ ಹಕ್ಕು ಮೂಲಭೂತ ಹಕ್ಕನ್ನಾಗಿ ಗುರುತಿಸಲಾಗಿಲ್ಲ. ಮೋಟಾರು ವಾಹನ ಕಾಯ್ದೆಯಲ್ಲಿ ಇದೊಂದು ಕೊರತೆಯಾಗಿದೆ. ಹಲವು ವಿಧಗಳಲ್ಲಿ ಪಾದಚಾರಿಗಳ ಅಮೂಲ್ಯ ಹಕ್ಕುಗಳನ್ನು ಈ ಮೂಲಕ ದುರ್ಬಲಗೊಳಿಸಿದೆ.
ರಸ್ತೆಗಳ ಇಕ್ಕೆಲಗಳಲ್ಲಿ ನಾಗರಿಕರಿಗೆ ಸುರಕ್ಷತೆಯಿಂದ ನಡೆಯುವ ವಾತಾವರಣ ನಿರ್ಮಿಸಬೇಕು. ಇದು ಪೌರಾಡಳಿತ/ನಗರಾಡಳಿತದ ಕನಿಷ್ಟಾತಿ ಕನಿಷ್ಟ ಕರ್ತವ್ಯವಲ್ಲವೇ? ಎಂಬ ಸುಪ್ರೀಂ ಕೋರ್ಟ್‌ನ ಪ್ರಶ್ನೆಯನ್ನು ದೇಶದ ಎಲ್ಲ ಪೌರಾಡಳಿತಗಳಲ್ಲಿ ನಾಗರಿಕರ ಬಗ್ಗೆ ಇರುವ ಜವಾಬ್ದಾರಿಯತ್ತ ಬೊಟ್ಟು ಮಾಡಿದೆ.
ಧಾರ್ಮಿಕ ಭಕ್ತಿ, ವಿಧಿಗಳೊಂದಿಗೆ ನಡೆಯುವ ಸಾಂಪ್ರದಾಯಿಕ ನಗರ ಸಂಕೀರ್ತನೆ ಎಂಬ ಸಾಮೂಹಿಕ ನಡಿಗೆ, ಜಾತಿ ಪದ್ಧತಿಯನ್ನು ತಾತ್ಕಾಲಿಕವಾಗಿ ನಿರ್ಮೂಲನೆ ಮಾಡಿದ "ಪಂಡರಾಪುರ ವಾರಿ" ಎಂಬ 800 ವರ್ಷಗಳ ಇತಿಹಾಸ ಇರುವ ಸಾಂಪ್ರದಾಯಿಕ ತೀರ್ಥಯಾತ್ರೆ, ಶಿವರಾತ್ರಿ ಸಮಯದಲ್ಲಿ ನೂರಾರು ಮೈಲಿಗಳ 'ಕಾವಾಡಿ' ಪಾದಯಾತ್ರೆ, ವಸಾಹತುಶಾಹಿ ವಿರುದ್ಧದ ಹೋರಾಟದ ಭಾಗವಾಗಿ ನಡೆದ 241 ಮೈಲುಗಳ ಪಾದಯಾತ್ರೆಯನ್ನು ದೇಶದ ಶಕ್ತಿಶಾಲಿ ಸ್ವಾತಂತ್ರ್ಯ ಹೋರಾಟವನ್ನಾಗಿ ರೂಪಿಸಿದ ಮಹಾತ್ಮಾ ಗಾಂಧಿಯವರ ಐತಿಹಾಸಿಕ ದಂಡಿಯಾತ್ರೆ, ನಿರ್ವಸಿತರಿಗೆ ಭೂಮಿಯನ್ನು ಹಕ್ಕನ್ನು ನೀಡಿದ ಚಾರಿತ್ರಿಕ ಭೂದಾನ ಚಳವಳಿಯಲ್ಲಿ ಆಚಾರ್ಯ ವಿನೋಭಾ ಭಾವೆ ಅವರ 70,000 ಕಿ.ಮೀ. ಉದ್ದದ ಪಾದಯಾತ್ರೆಗಳ ನೆನಪನ್ನು ಮಾಡಿರುವ ಸುಪ್ರೀಂಕೋರ್ಟ್, ಈ ಎಲ್ಲ ಉಲ್ಲೇಖಗಳ ಹಿಂದಿರುವ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಸುಧಾರಣಾತ್ಮಕ ಮೂಲಗಳ ಮೌಲ್ಯವನ್ನು ಎತ್ತಿ ತೋರಿಸಿದೆ.
ವಾಹನ ಬಳಕೆ ಹಕ್ಕಿಗಿಂತ ಕಾಲ್ನಡಿಗೆಯ ಹಕ್ಕಿಗೆ ಹೆಚ್ಚಿನ ಆದ್ಯತೆ ಎಂದು ಮತ್ತೆ ಮತ್ತೆ ನೆನಪಿಸಿರುವ ಸುಪ್ರೀಂ ಕೋರ್ಟ್, ಸಂವಿಧಾನದ ವಿಧಿ 19(1)(a), 19(1)(b), 19(1)(a) ಮತ್ತು 21ನೇ ವಿಧಿಯ ಅಡಿಯಲ್ಲಿ ಪಾದನಡಿಗೆಯ ಪ್ರಾಥಮಿಕ ಹಕ್ಕನ್ನು ಸಂವಿಧಾನ ಪ್ರಜೆಗಳಿಗೆ ನೀಡಲಾಗಿದೆ ಎಂಬುದಾಗಿ ಸ್ಪಷ್ಟ ಶಬ್ದಗಳಲ್ಲಿ ಹೇಳಿದೆ.
ವಾಹನಗಳು ಆವಿಷ್ಕಾರಗೊಳ್ಳುವ ಮೊದಲೇ ಮನುಷ್ಯರು ಈ ಭೂಮಿಯ ಮೇಲೆ ನಡೆದಾಡುತ್ತಿದ್ದರು. ಗುರುತಿಸಲಾದ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಮೂಲಭೂತ ಹಕ್ಕು. ರಸ್ತೆ ಬದಿಯಲ್ಲಿ ಸುರಕ್ಷಿತ ಫುಟ್‌ಪಾತ್ ಖಾತರಿಪಡಿಸುವುದು ಆಡಳಿತದ ಪ್ರಾಥಮಿಕ ಜವಾಬ್ದಾರಿ. ನಗರಾಡಳಿತವು ಮೋಟಾರು ಸಾರಿಗೆಗೆ ಹೇಗೆ ಆದ್ಯತೆ ನೀಡುತ್ತದೆಯೋ, ಅದೇ ರೀತಿ ಪಾದಚಾರಿ ಮಾರ್ಗಗಳನ್ನು ಸುರಕ್ಷಿತಗೊಳಿಸಲು ಮುಂದಾಗಬೇಕು ಎಂಬುದಾಗಿ ಈ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ರಸ್ತೆ ಅಸ್ತಿತ್ವದಲ್ಲಿ ಇದ್ದರೆ ಅದರ ಎರಡೂ ಬದಿಗಳಲ್ಲಿ ಸ್ಥಳ ನಿಗದಿಪಡಿಸಿ ಪಾದಚಾರಿ ಮಾರ್ಗ ನಿರ್ಮಿಸುವುದು ಮತ್ತು ನಿರ್ವಹಿಸುವುದು ಆ ರಸ್ತೆಯ ವ್ಯಾಪ್ತಿಗೊಳಪಟ್ಟ ನಗರಾಭಿವೃದ್ಧಿ ಅಧಿಕಾರಿಗಳು, ಪಾಲಿಕೆಗಳು, ಪುರಸಭೆಗಳು ಅಥವಾ ಪ್ರತಿ ಪಂಚಾಯತ್‌ನ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಉತ್ತಮ ಪಾದಚಾರಿ ಮಾರ್ಗ ಹೊಂದುವುದು ಮೂಲಭೂತ ಹಕ್ಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ ತೀರ್ಪು, ರಸ್ತೆ ಮತ್ತು ಸಂಚಾರದ ಪರಿಕಲ್ಪನೆಯನ್ನು ವಿಸ್ತರಿಸುವಂತಿದೆ.
ಈ ದಿಸೆಯಲ್ಲಿ, ಶಿಕ್ಷಣದ ಹಕ್ಕನ್ನು ಖಾತ್ರಿ ಪಡಿಸುವ 2009ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕುಗಳ ಕಾಯ್ದೆ ಮತ್ತು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ), 2013ರಲ್ಲಿ ಆಹಾರದ ಹಕ್ಕುಗಳ ನ್ನು ಖಾತ್ರಿ ಪಡಿಸುವ ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ, ಮಾಹಿತಿಯ ಹಕ್ಕನ್ನು ಖಾತ್ರಿಪಡಿಸುವ 2009ರ ಮಾಹಿತಿ ಹಕ್ಕುಗಳ ಕಾಯ್ದೆ (ಆರ್‌ಟಿಐ ಕಾಯ್ದೆ) ಗಳ ಮೌಲ್ಯ ಮತ್ತು ಮಹತ್ವವನ್ನು ಕೊಂಡಾಡುತ್ತಾ ರಸ್ತೆಯ ಬದಿಯಲ್ಲಿ ಸುರಕ್ಷಿತವಾಗಿ ನಡೆಯುವ ಹಕ್ಕುಗಳನ್ನು ಜತನದಿಂದ ಕಾಪಾಡಲು ದೇಶವ್ಯಾಪಿಯಾಗಿ ಯೋಜನೆ, ಜಾರಿ ಮತ್ತು ಅದರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಸುಪ್ರೀಂ ಕೋರ್ಟ್ ಕರೆ ನೀಡಿದೆ.
ಅಲ್ಲದೆ, ಈ ತೀರ್ಪಿನ ಅನುಷ್ಟಾನದ ಬಗ್ಗೆ ಹೌಸಿಂಗ್ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳಿಗೆ ಈ ತೀರ್ಪಿನ ಪ್ರತಿಯನ್ನು ಕಳಿಸಿಕೊಡಲು ರಿಜಿಸ್ತ್ರಿಗೆ ನಿರ್ದೇಶನವನ್ನು ನೀಡಿದೆ.
ಹಾಗೆಯೇ, ಫುಟ್‌ಪಾತ್‌ನಲ್ಲಿ ಸುರಕ್ಷಿತ ಕಾಲ್ನಡಿಗೆಯ ಮಹತ್ವ ಮತ್ತು ಸಂವಿಧಾನಿಕ ಹಕ್ಕಿನ ರಕ್ಷಣೆ ಕುರಿತ ಕಾನೂನು ರಚನೆ ಕುರಿತು ಅಧ್ಯಯನ ನಡೆಸಲು ಅನುಕೂಲವಾಗುವಂತೆ ಇನ್ನೊಂದು ಪ್ರತಿಯನ್ನು ರಾಷ್ಟ್ರೀಯ ಕಾನೂನು ಆಯೋಗಕ್ಕೂ ಕಳುಹಿಸಿಕೊಡಲು ರಿಜಿಸ್ತ್ರಿಗೆ ಸೂಚಿಸಿದೆ.
ಸುರಕ್ಷಿತ ನಡಿಗೆಯು ಮನುಷ್ಯನ ಜೀವನದಲ್ಲಿ ಅತಿ ಸರಳ ಚಟುವಟಿಕೆಯಾಗಿದೆ ಹಾಗೂ ಅದು ಗೌರವಯುತ ಜೀವನದ ಅವಿಭಾಜ್ಯ ಅಂಗವಾಗಿದೆ. ಸ್ವತಂತ್ರವಾಗಿ ನಡೆಯುವುದು ಒಂದು ಮೂಲಭೂತ ಹಕ್ಕಾಗಿದ್ದು, ಸುರಕ್ಷಿತ ನಡಿಗೆ ಖಚಿತಗೊಂಡಾಗ ಮಾತ್ರ ಆ ಹಕ್ಕು ಅರ್ಥಪೂರ್ಣವಾಗುತ್ತದೆ.
ವಾಹನಗಳು ಸೇರಿದಂತೆ ಎಲ್ಲ. ಅನುಕೂಲಗಳನ್ನು ಹೊಂದಿರುವ ಶ್ರೀಮಂತರು ಮತ್ತು ಅತಿ ಉನ್ನತ ಗಣ್ಯ ವರ್ಗದವರ ಅನುಕೂಲಕ್ಕೆ ತಕ್ಕಂತೆ ನಗರಗಳು ವಿನ್ಯಾಸಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಪಾದಚಾರಿಗಳು, ಅಂಗವಿಕಲರು, ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಜನರಿಗೂ ನಗರಗಳು ಸೇರಿವೆ ಎನ್ನುವ ಸಮಾನತೆಯ ಪರಿಕಲ್ಪನೆಯನ್ನು ಪ್ರತಿಪಾದಿಸುವಂತಿದೆ.
ಇದೇ ವೇಳೆ, ದೇಶದ ಯಾವುದೇ ಪಟ್ಟಣ ಅಥವಾ ನಗರದಲ್ಲಿ ಸಂಪೂರ್ಣ ಸುರಕ್ಷಿತ ಪಾದಚಾರಿ ಮಾರ್ಗವಿಲ್ಲ, ಬಹುತೇಕ ಪಾದಚಾರಿ ಮಾರ್ಗಗಳು ಹದಗೆಟ್ಟಿವೆ, ಅತಿಕ್ರಮಣಕ್ಕೊಳಗಾಗಿವೆ ಹಾಗೂ ಸಮರ್ಪಕ ನಿರ್ವಹಣೆ ಇಲ್ಲದೆ ವಿರೂಪಗೊಂಡಿವೆ. ವಾಹನಗಳ ನಿಲುಗಡೆ ಸ್ಥಳವಾಗಿಯೂ, ಕಟ್ಟಡ ಕಾಮಗಾರಿ ಸಾಮಗ್ರಿಗಳನ್ನು ಹಾಕುವ ಹಾಗೂ ತ್ಯಾಜ್ಯವನ್ನು ಚೆಲ್ಲುವ ಸ್ಥಳಗಳಾಗಿಯೂ ಪಾದಚಾರಿ ಮಾರ್ಗಗಳು ಬಳಕೆಯಾಗುತ್ತಿವೆ ಎಂಬುದನ್ನೂ ಗಮನಿಸಿದೆ.
ಈ ಸುಪ್ರೀಂ ಕೋರ್ಟ್‌ನ ಈ ಮೌಲ್ಯಯುತ ತೀರ್ಪನ್ನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಹಾಗೂ ಸಾಮರ್ಥ್ಯ ಆಡಳಿತ ವ್ಯವಸ್ಥೆಗೆ ಇದೆಯೇ ಹಾಗೂ ಅದಕ್ಕೆ ಅಗತ್ಯವಾದ ಸಂಪನ್ಮೂಲಗಳಿವೆಯೇ ಎಂಬ ಯಕ್ಷಪ್ರಶ್ನೆಗೆ ಸಿಗಬಹುದಾದ ಉತ್ತರಗಳು ಅಷ್ಟೇ ಸಂಕೀರ್ಣವಾಗಿವೆ.
ಲೇಖನ: ಶ್ರೀ ಸುಕೇಶ್ ಕುಮಾರ್ ಶೆಟ್ಟಿ, ವಕೀಲರು, ಮಂಗಳೂರು