ಕೇವಲ ಒಂದು ಸರಳ ಮೆಸ್ಸೇಜ್: ನಿಮ್ಮನ್ನು ಸುಲಭವಾಗಿ 'ಮಂಗ' ಮಾಡುತ್ತಾರೆ! - ಹೇಗೆ ಗೊತ್ತೇ?
ಕೇವಲ ಒಂದು ಸರಳ ಮೆಸ್ಸೇಜ್: ನಿಮ್ಮನ್ನು ಸುಲಭವಾಗಿ 'ಮಂಗ' ಮಾಡುತ್ತಾರೆ! - ಹೇಗೆ ಗೊತ್ತೇ?
ನಾನೊಬ್ಬ ವಕೀಲ. ನನ್ನ ವೃತ್ತಿ ಸೇವೆಯಲ್ಲಿ ನಾನು ಬಿಜಿಯಾಗಿದ್ದೆ. ಒಂದು ಅನಾಮಧೇಯ ಕಾಲ್ ಬರುತ್ತದೆ. 06200344492 ನಂಬರ್‌ನಿಂದ ಬಂದ ಆ ಕರೆಯಲ್ಲಿ ಅಸ್ಪಷ್ಟ ಹಿಂದಿಯಲ್ಲಿ ಗಂಡಸಿನ ಗಡಸು ಧ್ವನಿಯಲ್ಲಿ ಆ ಕಡೆಯಿಂದ ಮಾತು ಬರುತ್ತದೆ..
ಮಾತನ ಸಾರಾಂಶ : "ನಿಮಗೆ ಒಂದು ದಾಖಲೆ ಪಾರ್ಸೆಲ್ ಬಂದಿದೆ. ಬ್ಲೂ ಡಾರ್ಟ್ ಮೂಲಕ. ಪಾರ್ಸೆಲ್ ನಿಮಗೆ ತಲುಪಿಸಲಾಗುತ್ತದೆ. ನಿಮ್ಮ ವಿಳಾಸವನ್ನು ನಮ್ಮ ಕೊರಿಯರ್ ಹುಡುಗನಿಗೆ ಕೊಡಿ. ಅವನ ಫೋನ್ ನಂಬರ್‌ನ್ನು ನಿಮ್ಮ "ಇನ್ ಬಾಕ್ಸ್"ಗೆ (sms text) ಮಾಡುತ್ತೇನೆ.
ಕುತೂಹಲವಾಗಿ ನಾನು ಕೇಳಿದೆ.. ಕೊರಿಯರ್ ಎಲ್ಲಿಂದ ಬಂದಿದೆ? ಕಳುಹಿಸಿದವರು ಯಾರು..?
ಅದಕ್ಕೆ ಉತ್ತರವಾಗಿ, (ಅಸ್ಪಷ್ಟವಾಗಿ) ಸರ್ಕಾರದ ಕಡೆಯಿಂದ ಬಂದಿದೆ. ಎಂದು ಹೇಳಿ ಫೋನ್ ಕಟ್ ಆಯಿತು.
ಕ್ಷಣಾರ್ಧದಲ್ಲೇ ಒಂದು sms text ಸಂದೇಶ ಬಂತು. ಅದರಲ್ಲಿ *21*7323 837367# ಎಂಬ ಸಂದೇಶ ಅದರಲ್ಲಿ ಇತ್ತು.
ಕರೆ ಬಂದ ಆ ಹೊತ್ತು ನಾನು ಊಟ ಮಾಡುತ್ತಿದ್ದೆ. ಹಾಗಾಗಿ, ತಕ್ಷಣ ಆ ಕಾಲ್‌ಗೆ/ ಸಂದೇಶಕ್ಕೆ ಪ್ರತಿಕ್ರಿಯೆ ಮಾಡಲಿಲ್ಲ. ಒಂದು ಸ್ವಲ್ಪ ಹೊತ್ತು ಕಳೆದ ನಂತರ ಮತ್ತೆ ಅದೇ ಅನಾಮಧೇಯನ ಕರೆ ಬಂತು. ನನ್ನ ಡೆಲಿವರಿ ಬಾಯ್‌ಗೆ ಕಾಲ್ ಮಡಿದಿರಾ..?
'ಇಲ್ಲ, ಈಗ ಮಾಡುತ್ತೇನೆ.' ಅಂದೆ. ಈಗ ಮಾಡುತ್ತೇನೆ ಎಂದು ಕಾಲ್ ಇಟ್ಟೆ.
ನೋಡಿದಾಗ, ನನಗೆ ಟೆಕ್ಸ್ಟ್ ಬಂದಿರುವುದನ್ನು ಗಮನಿಸಿದೆ. ಸಾಮಾನ್ಯವಾಗಿ ಒಂದು ಮೊಬೈಲ್ ನಂಬರ್ ಇರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ನನಗೆ ಆಶ್ಚರ್ಯವಾಯಿತು.
ಅದೊಂದು ವಿಚಿತ್ರ ಮೆಸ್ಸೇಜ್ ಆಗಿತ್ತು. ತಕ್ಷಣ ಆ ಸಂದೇಶದ ಬಗ್ಗೆ ಸ್ಪಷ್ಟ ಮಾಹಿತಿ ಸಂಗ್ರಹಿಸಿದೆ. ಅದು ಸ್ಪ್ಯಾಮ್ ಆಗಿತ್ತು. ನನ್ನ ಮೊಬೈಲ್‌ಗೆ ಬರುವ ಮೆಸ್ಸೇಜ್, ಕಾಲ್‌ಗಳನ್ನು ಡೈವರ್ಟ್ ಮಾಡುವ ವಿಧಾನವಾಗಿತ್ತು ಆ ಟೆಕ್ಸ್ಟ್.
ಒಂದು ವೇಳೆ, ಆ ಸಂದೇಶಕ್ಕೆ ನಾನು ಕರೆ ಮಾಡಿದ್ದರೆ, ಅದು ಟ್ರಾಯ್‌ಗೆ ಅಂದರೆ ನನ್ನ ಮೊಬೈಲ್ ಸಿಮ್ ಕಂಪೆನಿಗೆ ನಾನು ನೀಡುವ ಆದೇಶವಾಗಿತ್ತು. ನನ್ನ ಕರೆಯನ್ನು ಡೈವರ್ಟ್ ಮಾಡಲು ನಾನು ನನ್ನ ಮೊಬೈಲ್ ಸಿಮ್ ಕಂಪೆನಿಗೆ ನೀಡುವ ಸ್ಪಷ್ಟ ಆದೇಶ.
ಈ ಆದೇಶವನ್ನು ಬಳಸಿ, ಹ್ಯಾಕರ್‌ಗಳು, ವಂಚಕರು ನನ್ನ ಮೊಬೈಲ್‌ಗೆ ಬರುವ ಯಾವುದೇ ಮೆಸ್ಸೇಜನ್ನು ತಮ್ಮ ಮೊಬೈಲ್‌ಗೆ ಬರಿಸಿ ಹ್ಯಾಕ್ ಮಾಡಿ ವಂಚಿಸುತ್ತಿದ್ದರು.
ಕ್ಷಣಾರ್ಧದಲ್ಲೇ ನಡೆಯುವ ವಂಚನೆಯಿಂದ ನಾನು ಬಚಾವಾದೆ. ಎಷ್ಟೊಂದು ಸರಳವಾಗಿ ಸುಲಭವಾಗಿ ನಮ್ಮನ್ನು ಮಂಗ ಮಾಡುತ್ತಾರೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.
ಈ ವಿಷಯವನ್ನು ನಿಮ್ಮೆಲ್ಲರ ಜೊತೆಗೆ ಯಾಕೆ ಹಂಚುತ್ತಿದ್ದೇನೆ ಎಂದರೆ, ನೀವು ಈ ರೀತಿಯಾಗಿ ಯಾವುದೇ ಅನಾಮಧೇಯ ಕಾಲ್ ಬಂದಾಗ ಸುಲಭವಾಗಿ ವಂಚನೆಗೊಳಗಾಗುವ ಸಾಧ್ಯತೆ ಇದೆ.
ಎಚ್ಚರ!